ಅಯೋಧ್ಯೆ, ನ 11 (DaijiworldNews/PC): ದೇಶದೆಲ್ಲೆಡೆ ಜನರು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಪಟಾಕಿಗಳ ಸದ್ದು, ಮನೆಯಂಗಳದಲ್ಲಿ ಸಾಲು ಸಾಲು ಹಣತೆಗಳು, ವಿವಿಧ ರೀತಿಯ ಖಾದ್ಯಗಳು ಹಬ್ಬಕ್ಕೆ ಇನ್ನಷ್ಟು ಮೆರುಗನ್ನು ನೀಡಿದೆ. ಆದರೆ ರಾಮ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬವು ಒಂದು ಹೊಸ ದಾಖಲೆಯನ್ನೇ ಸೃಷ್ಟಿಸಿದೆ.
ಹೌದು ರಾಮ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಒಂದು ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ. ಈ ದೀಪಾವಳಿ ಹಿನ್ನೆಲೆಯಲ್ಲಿ ಸುಮಾರು 24 ಲಕ್ಷಕ್ಕೂ ಹೆಚ್ಚಿನ ದೀಪಗಳನ್ನು ಹಚ್ಚಿದ್ದಾರೆ. ಗಂಗಾ ನದಿಯ ದಡದ ಉದ್ದಕ್ಕೂ ಜನರು ದೀಪಗಳನ್ನು ಬೆಳಗಿಸಿದ್ದು ನೋಡುಗರ ಕಣ್ಮನ ಸೆಳೆಯುವಂತಿತ್ತು.
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಸೇರಿದಂತೆ ವಿಶ್ವದ 41 ದೇಶಗಳ 61 ಪ್ರತಿನಿಧಿಗಳು ಕೂಡ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು. ಸಂಜೆ ಸರಯೂ ದಡದಲ್ಲಿ ಸಿಎಂ ಯೋಗಿ ಅವರು ಗಂಗಾರತಿ ಮಾಡಿದರು.
2017 ರಿಂದ ಅಯೋಧ್ಯೆಯಲ್ಲಿ ಪ್ರತಿ ವರ್ಷ ದೀಪೋತ್ಸವ ಮಾಡಲಾಗುತ್ತಿದ್ದು ಇದನ್ನು ಸಿಎಂ ಯೋಗಿ ಆದಿತ್ಯನಾಥ್ ಈ ಸಂಪ್ರದಾಯವನ್ನು ಮೊದಲು ಆರಂಭಿಸಿದರು. ಪ್ರತೀ ವರ್ಷ ಲಕ್ಷಗಟ್ಟಲೇ ದೀಪಗಳನ್ನು ಹಚ್ಚುವ ಭಕ್ತರು ಈ ಬಾರಿ ಸುಮಾರು 24 ಲಕ್ಷ ದೀಪಗಳನ್ನು ಬೆಳಗಿಸಿದ್ದಾರೆ. ನಗರದ ಜನತೆ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಂಡವು 24,59,000 ದೀಪಗಳನ್ನು ಬೆಳಗಿಸಿದೆ ಎಂದು ಲೆಕ್ಕ ಹಾಕಿದೆ.