ಬೆಂಗಳೂರು, ನ. 10 (DaijiworldNews/AA): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿಗಳಿಂದ ಉಂಟಾಗುವ ಅವಘಡಗಳನ್ನು ತಡೆಗಟ್ಟಲು ಸುಪ್ರಿಂಕೋರ್ಟ್ ನ ಆದೇಶ ಪಾಲಿಸುವುದು ಕಡ್ಡಾಯವಾಗಿದೆ. ಈ ಸಮಯದಲ್ಲಿ ಸಂಭವಿಸಬಹುದಾದ ಅಪಘಾತ ಹಾಗೂ ಅನಾಹುತಗಳನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಇನ್ನು ಪಟಾಕಿ ಮಾರಾಟಕ್ಕೆ ರಾಜ್ಯ ಪೊಲೀಸ್ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಸೂಚನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಪೊಲೀಸ್ ಇಲಾಖೆಯ ನಿಬಂಧನೆಗಳು ಮತ್ತು ಷರತ್ತುಗಳು:
1. ಸುಪ್ರಿಂಕೋರ್ಟ್ ಆದೇಶದಂತೆ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು.
2. ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಮತ್ತು ಕ್ಯೂಆರ್ ಕೋಡ್ ಖಡ್ಡಾಯವಾಗಿ ಇರಬೇಕು.
3. ಪಟಾಕಿ ಮಾರುವ ಅಂಗಡಿಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು.
4. ಪಟಾಕಿ ಅಂಗಡಿಗಳನ್ನು ನಿರ್ಮಿಸಲು ಉಪಯೋಗಿಸುವ ಸಲಕರಣೆಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ರೀತಿಯದ್ದು ಆಗಿರಬಾರದು. ಸಾಧ್ಯವಾದಲ್ಲಿ ಬೆಂಕಿ ತಡೆಗಟ್ಟುವ ಸಲಕರಣೆಗಳನ್ನೇ ಅಂಗಡಿ ನಿರ್ಮಣಕ್ಕೆ ಬಳಸಬೇಕು.
5. ಪ್ರತಿಯೊಂದು ಅಂಗಡಿಗಳಿಗೆ ಮುಂದೆ ಇಂದ ಹಾಗೂ ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು. ಈ ಮೂಲಕ ಅವಘಡಗಳು ಸಂಭವಿಸಿದಾಗ ಅಂಗಡಿಯ ಒಳಗೆ ಇದ್ದವರನ್ನು ರಕ್ಷಿಸಲು ಹಾಗೂ ಅವಶ್ಯಕತೆ ಇದ್ದರೆ ಅಂಗಡಿ ಒಡೆದು ಒಳಗೆ ಪ್ರವೇಶಿಸಬಹುದು.
6. ಪ್ರತಿಯೊಂದು ಅಂಗಡಿಗಳ ಗಾತ್ರವು 10 x 10 ಅಡಿಗೆ ಸೀಮಿತವಾಗಿರಬೇಕು. ಅಷ್ಟೇ ಅಲ್ಲದೆ ಅಂಗಡಿಯಲ್ಲಿ ಹೆಚ್ಚಿನ ದಾಸ್ತಾನು ಇಟ್ಟುಕೊಳ್ಳುವಂತಿಲ್ಲ.
7. ಒಂದು ಪಟಾಕಿ ಅಂಗಡಿಯಿಂದ ಮತ್ತೊಂದು ಅಂಗಡಿಗೆ 3 ಮೀ. ಅಂತರ ಇರಬೇಕು ಮತ್ತು ಅಂಗಡಿಯು ಯಾವುದೇ ರಕ್ಷಿತ ಕಾರ್ಯದಿಂದ ಅಥವಾ ಸ್ಥಳದಿಂದ 50 ಮೀ. ದೂರದಲ್ಲಿರಬೇಕು.
8. ಪಟಾಕಿ ಅಂಗಡಿಗಳಲ್ಲಿ ಕಚೇರಿಯಿಂದ ನೀಡಿರುವ ಪರವಾನಿಗೆ ಪ್ರತಿಯನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು.
9. ಕಚೇರಿಯಿಂದ ಪರವಾನಿಗೆ ಪತ್ರ ಪಡೆದಿರುವವರು ಕಡ್ಡಾಯವಾಗಿ ಅಂಗಡಿಯಲ್ಲಿ ಇರಬೇಕು.
10. ಪಟಾಕಿ ಅಂಗಡಿಗಳಲ್ಲಿ ಕೇವಲ ಭಾರತೀಯ ತಯಾರಿಕಾ ಕಂಪನಿಗಳ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ವಿದೇಶಿ ತಯಾರಿಕ ಪಟಾಕಿಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
11. ಪಟಾಕಿ ಮಾರಾಟ ಮಾಡುವ ಪ್ರತಿಯೊಂದು ಅಂಗಡಿಯಲ್ಲಿ ಈ ಕೆಳಗೆ ಸೂಚಿಸಿರುವ ಅಗ್ನಿ ನಿವರಣಾ ಮತ್ತು ಅಗ್ನಿಶಮನ ವ್ಯವಸ್ಥೆ ಇರಬೇಕು.
* ಅಂಗಡಿಯಲ್ಲಿ ಒಂದು 9 ಲೀಟರ್ ಸಾಮರ್ಥ್ಯದ ವಾಟರ್ ಪ್ರಜರ್ ಮಾದರಿ ಅಗ್ನಿನಂದಕ ಮತ್ತು 2 ಬಕೆಟ್ಗಳಲ್ಲಿ ನೀರು ತುಂಬಿಸಿ ಇಟ್ಟಿರಬೇಕು.
* ಪ್ರತಿಯೊಂದು ಅಂಗಡಿ ಪಕ್ಕದಲ್ಲಿ 2 ಡ್ರಮ್ನಲ್ಲಿ ಕನಿಷ್ಟ 400 ಲೀ. ನೀರನ್ನು ತುಂಬಿಸಿಟ್ಟಿರಬೇಕು ಮತ್ತು ಬೆಂಕಿ ನಂದಿಸಲು ಸಾಕಷ್ಟು ಮರಳನ್ನು ಶೇಖರಿಸಿಟ್ಟಿರಬೇಕು.
* ಅಂಗಡಿಯಲ್ಲಿ ಅಡಿಗೆ ಅಥವಾ ಧೂಮಪಾನಕ್ಕೆ ಅವಕಾಶ ನೀಡಬಾರದು ಹಾಗೂ ಇದಕ್ಕೆ ಸಂಬಂಧಿಸಿದ ಸೂಚನಾ ಫಲಕ ಹಾಕಿರಬೇಕು.
* ಸುಡುಮದ್ದುಗಳನ್ನು ಕೇವಲ ಹಗಲಿನಲ್ಲಿ ಮಾರಾಟ ಮಾಡಬೇಕು.
* ಪಟಾಕಿ ಅಂಗಡಿಯಲ್ಲಿ ರಾತ್ರಿ ಯಾರೂ ಮಲಗದಂತೆ ನೋಡಿಕೊಳ್ಳಬೇಕು.
* ಅಂಗಡಿಯಲ್ಲಿ ಸೂಕ್ತ ಎಲೆಕ್ಟ್ರಿಕಲ್ ವೈರಿಂಗ್ ಮತ್ತು ಫಿಟಿಂಗ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು.
* ಪರವಾನಿಗೆದಾರರು ಕಚೇರಿಯಿಂದ ನೀಡಿರುವ ಪರವಾನಗಿಯಲ್ಲಿ ನಿಗಧಿಪಡಿಸಿರುವ ದಿನಾಂಕ ಹಾಗೂ ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು ಬೇರೆ ಸ್ಥಳದಲ್ಲಿ ಹಾಗೂ ದಿನಾಂಕಗಳಲ್ಲಿ ಮಳಿಗೆ ಇಡಬಾರದು.
* ಈ ಮೇಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸೂಚನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆ ಸುತ್ತೋಲೆ ಹೊರಡಿಸಿದೆ.