ಅಹಮದಾಬಾದ್, ನ 09 (DaijiworldNews/RA): ಇನ್ಶೂರೆನ್ಸ್ ಹಣಕ್ಕಾಗಿ ನಿರ್ಗತಿಕ ಭಿಕ್ಷುಕನನ್ನು ಕೊಲೆ ಮಾಡಿ 17 ವರ್ಷಗಳವರೆಗೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಭಟ್ಟ-ಪರ್ಸೌಲ್ ಗ್ರಾಮದ ನಿವಾಸಿ ಅನಿಲ್ ಸಿಂಗ್ ವಿಜಯ್ ಪಾಲ್ ಸಿಂಗ್ ಚೌಧರಿ ಬಂಧಿತ ಆರೋಪಿಯಾಗಿದ್ದಾನೆ.
ಈತ 80 ಲಕ್ಷ ರೂ. ವಿಮೆ ಹಣಕ್ಕಾಗಿ ಭಿಕ್ಷುನೊಬ್ಬನ ಕೊಂದು ತನ್ನದೇ ಸಾವೆಂದು ಬಿಂಬಿಸಿದ್ದ. 2006ರ ಜುಲೈ 31ರಂದು ಆಗ್ರಾದ ರಾಕಬ್ಗಂಜ್ ಪೊಲೀಸ್ ಠಾಣೆಯಲ್ಲಿ ಕಾರು ಅಪಘಾತ ಪ್ರಕರಣವೊಂದು ದಾಖಲಾಗಿತ್ತು. ಅಪಘಾತದಲ್ಲಿ ಕಾರು ಹೊತ್ತು ಉರಿದು ಚಾಲಕ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದ. ಆ ಸಮಯದಲ್ಲಿ ಮೃತ ಚಾಲಕನನ್ನು ಅವರ ತಂದೆಯ ಹೇಳಿಕೆಯಂತೆ ಅನಿಲ್ ಸಿಂಗ್ ವಿಜಯ್ ಪಾಲ್ ಸಿಂಗ್ ಎಂದು ಗುರುತಿಸಲಾಗಿತ್ತು.ಆದರೆ ಅಹಮದಾಬಾದ್ ನಗರ ಕ್ರೈಂ ಬ್ರಾಂಚ್ ಪೊಲೀಸರಿಗೆ ಅನಿಲ್ ಸಿಂಗ್ ಇನ್ನೂ ಜೀವಂತವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಆತ ನಗರದ ನಿಕೋಲ್ ಏರಿಯಾದಲ್ಲಿ ರಾಜ್ಕುಮಾರ್ ಚೌಧರಿ ಹೆಸರಿನಲ್ಲಿ ವಾಸವಿದ್ದ ಅನ್ನುವ ವಿಚಾರ ತಿಳಿದು ಬಂದಿದೆ.
ಈ ವೇಳೆ ಆತನನ್ನು ಬಂಧಿಸಿದಾಗ ಪ್ರಕರಣದ ಅಸಲಿಯತ್ತು ಬಯಲಾಗಿದೆ. ಸಾವಿನ ನಂತರ ಬರುವ ಇನ್ಶೂರೆನ್ಸ್ ಹಣವನ್ನು ಪಡೆಯುವುದಕ್ಕಾಗಿ ತಾನು ಮತ್ತು ತನ್ನ ತಂದೆ ಸೇರಿಕೊಂಡು ಮಾಡಿದ ಸಂಚು ಎಂಬ ವಿಚಾರವನ್ನು ಆರೋಪಿ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ. ಯಾರೋ ನೀಡಿದ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಪ್ರಕರಣ ಸತ್ಯಾಸತ್ಯತೆ ಬಯಲಾಗಿದೆ. ಸದ್ಯ ಆರೋಪಿ ಅನಿಲ್ ನನ್ನು ಬಂಧಿಸಿರುವ ಉತ್ತರ ಪ್ರದೇಶ ಪೊಲೀಸರು ಈ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.