ಬೆಂಗಳೂರು, ಏ 15(SM): ಸಂಚಾರಿ ಪೊಲೀಸರ ಕೈಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಸಾರ್ವಜನಿಕರಿಗೆ ಸಿಹಿಸುದ್ದಿಯೊಂದನ್ನು ರಸ್ತೆ ಸಾರಿಗೆ ಸಚಿವಾಲಯ ನೀಡಿದೆ. ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪತ್ರ ಮತ್ತು ಇನ್ಶೂರೆನ್ಸ್ ದಾಖಲೆ ಪತ್ರಗಳ ಮೂಲ ಪ್ರತಿಗಳನ್ನು ಇನ್ನು ಮುಂದೆ ಕೇಳುವಂತಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಗಳಂತೆ ವಾಹನ ಸವಾರರಿಂದ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪತ್ರ ಮತ್ತು ಇನ್ಶೂರೆನ್ಸ್ ಪತ್ರಗಳ ಮೂಲ ದಾಖಲೆಯನ್ನೇ ಕೇಳುವಂತಿಲ್ಲ. ಇದು ರಾಜ್ಯ ಸರ್ಕಾರದ ವ್ಯಾಪ್ತಿಗೂ ಒಳಪಡಲಿದೆ. ಎಲೆಕ್ಟ್ರಾನಿಕ್ ಸ್ವರೂಪದ' ದಾಖಲೆಗಳನ್ನು ಅಧಿಕೃತವೆಂದೇ ಅಧಿಕಾರಿಗಳು ಪರಿಗಣಿಸತಕ್ಕದ್ದು ಎಂದು ಸಚಿವಾಲಯ ತಿಳಿಸಿದೆ.
ಆ ಮೂಲಕ ಇನ್ನು ಮುಂದೆ ವಾಹನ ಸವಾರರು ತಮ್ಮ ಜತೆಯಲ್ಲಿ ಮೂಲ ದಾಖಲೆಗಳನ್ನೇ ಹೊಂದಿರಬೇಕೆಂಬ ಅಗತ್ಯವಿಲ್ಲ. ಒಂದೊಮ್ಮೆ ಮೂಲ ದಾಖಲೆಗಳಿಲ್ಲದಿದ್ದರೂ, ದಾಖಲೆಗಳ ಪ್ರತಿಗಳನ್ನು ಒಳಗೊಂಡಿದ್ದರೂ ನಿರ್ಭೀತಿಯ ಸಂಚಾರ ನಡೆಸಬಹುದಾಗಿದೆ.