ಬೆಂಗಳೂರು, ನ 08 (DaijiworldNews/AK): 11 ವರ್ಷದ ಹಿಂದೆ ನಡೆದ ಸೌಜನ್ಯಾ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್ ಖುಲಾಸೆಗೊಳಿಸಿದ ಕೇಂದ್ರೀಯ ತನಿಖಾ ದಳವು ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇದೀಗ ಮತ್ತೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸಲ್ಪಟ್ಟಿದ್ದ ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿದ ನಾಲ್ಕು ತಿಂಗಳ ಬಳಿಕ ಇದೀಗ ಸಿಬಿಐ ಸೌಜನ್ಯಾಳನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿ ಸಂತೋಷ್ ರಾವ್ ಎಂದು ಸಾಬೀತು ಮಾಡಲು ಮುಂದಾಗಿದೆ.
ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪ್ರತಿಭಟನೆ ಬಳಿಕ ರಾಜ್ಯ ಸರ್ಕಾರ ಸಿಬಿಐಗೆ ತನಿಖೆ ಜವಾಬ್ದಾರಿ ಒಪ್ಪಿಸಿತ್ತು. ಅದರಂತೆ ಸಂಸ್ಥೆಯು ತನಿಖೆ ನಡೆಸಿತ್ತು. ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಕೂಡಾ ನಡೆದಿತ್ತು.ಸಂತೋಷ್ ರಾವ್ ವಿರುದ್ಧ ಸಾಕ್ಷ್ಯ ಗಳಿಲ್ಲದ ಕಾರಣ ಕೋರ್ಟ್ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ನೀಡಿ ಬಿಡುಗಡೆ ಮಾಡಿತ್ತು.
2023ರ ಜುಲೈ 16ರಂದು ನೀಡಿದ ತೀರ್ಪಿನ ವಿರುದ್ಧ ಈಗ ಮೇಲ್ಮನವಿ ಸಲ್ಲಿಸಲಾಗಿದೆ. ಜುಲೈ 16ರಂದು ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿದ್ದ ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯವು ಮೇಲ್ಮನವಿ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿತ್ತು. ಆದರೆ, ತೀರ್ಪು ಬಂದ ನಾಲ್ಕು ತಿಂಗಳ ಬಳಿಕ ಮನವಿ ಮಾಡಲಾಗಿದೆ.