ಹರಿಯಾಣ, ನ 07 (DaijiworldNews/AA) : ಯುಪಿಎಸ್ ಸಿ ಎದುರಿಸುವ ಎಲ್ಲಾ ಅಭ್ಯರ್ಥಿಗಳಿಗೂ ಉತ್ತಮ ರ್ಯಾಂಕ್ ಗಳಿಸುವ ಮೂಲಕ ಸಫಲವಾಗುವುದು ಅವರ ಬಹುದೊಡ್ಡ ಕನಸಾಗಿರುತ್ತದೆ. ಕಠಿಣ ಪರೀಕ್ಷೆ ಎದುರಿಸುವುದು ಬಹಳಷ್ಟು ಜನರಿಗೆ ಕಷ್ಟಸಾಧ್ಯವಾದರೂ ಪರಿಶ್ರಮ, ಶೃದ್ದೆ ಹಾಗೂ ಪ್ರಯತ್ನದಿಂದ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ ಐಎಎಸ್ ಅಧಿಕಾರಿ ದಿವ್ಯ ತನ್ವರ್.
ದಿವ್ಯ ತನ್ವರ್ ಅವರು ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯುವಾಗ ಅವರಿಗೆ ಕೇವಲ 21 ವರ್ಷ ವಯಸ್ಸಾಗಿತ್ತು 2021 ರಲ್ಲಿ ಮೊದಲ ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದ ದಿವ್ಯ ತನ್ವರ್ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಇಡೀ ಭಾರತದಲ್ಲೇ (AIR) 438ನೇ ರ್ಯಾಂಕ್ ಪಡೆದುಕೊಂಡರು.
ದಿವ್ಯ ತನ್ವರ್ ಅವರು ಯುಪಿಎಸ್ ಸಿ ಪರೀಕ್ಷೆಯನ್ನು ಯಾವುದೇ ಕೋಚಿಂಗ್ ಪಡೆಯದೇ ಸ್ವಪ್ರಯತ್ನದಿಂದಲೇ ಬರೆದು ಉತ್ತೀರ್ಣರಾದರು. ಆದರೆ ತನ್ನ ರ್ಯಾಂಕ್ ನಿಂದ ತೃಪ್ತರಾಗದ ಅವರು 2022 ರಲ್ಲಿ ಮತ್ತೆ ಯುಪಿಎಸ್ ಸಿ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಎದುರಿಸಿ 105ನೇ ರ್ಯಾಂಕ್ ಪಡೆದರು.
ಮೂಲತಃ ಹರಿಯಾಣ ರಾಜ್ಯದ ಮಹೇಂದ್ರಘರ್ ನವರಾದ ದಿವ್ಯ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪಡೆದರು. ಬಳಿಕ ಮಹೇಂದ್ರಘರ್ ನವೋದಯ ವಿದ್ಯಾಲಯದಲ್ಲಿ ಶಿಕ್ಷಣವನ್ನು ಪಡೆದರು. ಸೈನ್ಸ್ ನಲ್ಲಿ ಪದವಿಯಲ್ಲಿ ಪಡೆಯುತ್ತಿದ್ದಂತೆಯೇ ಯುಪಿಎಸ್ ಸಿ ಪರೀಕ್ಷೆ ಬರೆಯಲು ತಯಾರಿ ನಡೆಸಿದರು. ಇನ್ನು ದಿವ್ಯ ಅವರ ತಂದೆ 2011ರಲ್ಲೇ ನಿಧನರಾಗಿದ್ದರಿಂದ ಅವರ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನು ಉತ್ತಮವಾಗಿರಲಿಲ್ಲ. ಆದರೆ ದಿವ್ಯ ಅವರ ತಾಯಿ ಬಬಿತಾ ಅವರು ಮಗಳ ಕನಸಿಗೆ ಬೆನ್ನೆಲುಬಾಗಿ ನಿಂತು ಮಗಳಿಗೆ ಬೇಕಾದ ಎಲ್ಲಾ ರೀತಿಯ ಬೆಂಬಲ ನೀಡಿದರು.ದಿವ್ಯಾ ಅವರು ಯುಪಿಎಸ್ ಸಿ ಪ್ರಿಲಿಮಿನರಿ ಪರೀಕ್ಷೆಯನ್ನು ಯಾವುದೇ ಕೋಚಿಂಗ್ ಪಡೆಯದೇ ಪಾಸಾಗಿ, ಬಳಿಕ ಯುಪಿಎಸ್ ಸಿ ಮುಖ್ಯ ಪರೀಕ್ಷೆಗೆ ತಯಾರಿ ನಡೆಸಿದರು. ದಿವ್ಯ ಅವರು ಆನ್ ಲೈನ್ ಅಲ್ಲಿ ಸಿಗುತ್ತಿದ್ದ ವಿವಿಧ ಸಂಪನ್ಮೂಲಗಳು, ಹಾಗೂ ಟೆಸ್ಟ್ ಸೀರಿಸ್ ಗಳನ್ನು ಬಳಸಿಕೊಂಡು ಯುಪಿಎಸ್ ಸಿ ಪರೀಕ್ಷೆಯನ್ನು ಎರೆಡೆರಡು ಬಾರಿ ಎದುರಿಸಿದರು.
ದಿವ್ಯಾ ತಾಯಿ ಬಬಿತಾ ಅವರ ಮೂವರು ಮಕ್ಕಳನ್ನು ಸಾಕುವ ಜವಬ್ದಾರಿ ಜೊತೆಗೆ ಮಗಳು ದಿವ್ಯ ಅವರಿಗೆ ಯುಪಿಎಸ್ ಸಿ ಎದುರಿಸಲು ಪ್ರೋತ್ಸಾಹ ನೀಡುತ್ತಿದ್ದರು. ಕೊನೆಗೆ ತನ್ನ ತಾಯಿ ಪರಿಶ್ರಮ ಹಾಗೂ ತನ್ನ ಕನಸನ್ನ ನನಸಾಗಿಸಿಕೊಳ್ಳುವುದರಲ್ಲಿ ದಿವ್ಯ ಅವರು ಯಶಸ್ವಿಯಾದರು. ಇಂದು ದಿವ್ಯ ತನ್ವಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದು, ಇನ್ ಸ್ಟಾಗ್ರಾಂನಲ್ಲಿ ಸುಮಾರು 97,000 ಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ ಮೋಟಿವೇಶನಲ್ ವಿಡಿಯೋಗಳನ್ನ ಆಗಾಗ ಹಂಚಿಕೊಳ್ಳುತ್ತಿರುವ ಅವರು ಎಲ್ಲಾ ಯುವಜನತೆಗೆ ಮಾದರಿ ಎನಿಸಿಕೊಂಡಿದ್ದಾರೆ. ಹಾಗೇ ದಿವ್ಯಾ ತನ್ವಾರ್ ಅವರು ತಮ್ಮ 22 ನೇ ವಯಸ್ಸಿಗೇ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಶ್ಲಾಘನೀಯ.