ಇಂದೋರ್ ನ 07 (DaijiworldNews/MS): ಇಂದೋರ್ ರ್ಯಾಲಿಯಲ್ಲಿ ಪಕ್ಷದ ನಾಯಕರೊಬ್ಬರು ಕೊಟ್ಟ ಹೂಗುಚ್ಛ ಕಂಡು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರಿಗೆ ಸಭೆಯಲ್ಲಿ ನಗು ತಡೆಯಲಾಗಲಿಲ್ಲ.! ಹೌದು ಇದರ ವಿಡಿಯೋ ವೈರಲ್ ಆಗಿದ್ದು, ಈ ಘಟನೆಯನ್ನು ಕಾಂಗ್ರೆಸ್ ನಾಯಕಿ ವಿನೋಧವಾಗಿಯೇ ಸ್ವೀಕರಿಸಿ ಬಳಿಕ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ನವೆಂಬರ್ 25 ರಂದು ಮತದಾನ ನಡೆಯಲಿರುವ ಮಧ್ಯಪ್ರದೇಶದ ಇಂದೋರ್ನಲ್ಲಿ ಕಾಂಗ್ರೆಸ್ ಮುಖಂಡರ ರ್ಯಾಲಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗವಹಿಸಿದ್ದರು. ಅವರನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಪಕ್ಷದ ಮುಖಂಡರು ಒಬ್ಬೊಬ್ಬರಾಗಿ ಅವರ ಬಳಿಗೆ ತೆರಳಿ ಶುಭಾಶಯ ಕೋರುತ್ತಿದ್ದರು. ಅವರು ತಮ್ಮ ಪಕ್ಷದ ನಾಯಕರೊಂದಿಗೆ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು.
ಈ ವೇಳೆ , ಕಾಂಗ್ರೆಸ್ ಕಾರ್ಯಕರ್ತ ದೇವೇಂದ್ರ ಯಾದವ್ ಪುಷ್ಪಗುಚ್ಛದಂತೆ ಕಾಣುವ ಚೌಕಟ್ಟು ಮಾತ್ರವಿರುವ ಗುಚ್ಚದೊಂದಿಗೆ ಬಂದು ಅದನ್ನು ಪ್ರಿಯಾಂಕಾ ಗಾಂಧಿಗೆ ಹಸ್ತಾಂತರಿಸುತ್ತಾರೆ. ಆದರೆ ಇದನ್ನು ನೋಡಿದ ತಕ್ಷಣ ಪ್ರಿಯಾಂಕಾ ನಗಲು ಪ್ರಾರಂಭಿಸುತ್ತಾರೆ. ಪುಷ್ಪಗಳೇ ಇಲ್ಲದ ಖಾಲಿ ಗುಚ್ಚದ ಗಮನಿಸಿದ ಅವರು ನಂತರ "ಹೂಗಳು ಎಲ್ಲಿವೆ?" ಎಂದು ಕೇಳಿ ನಗುತ್ತಾರೆ. ಈ ವೇಳೆ ಪಕ್ಷದ ಕಾರ್ಯಕರ್ತರು, ಮುಜುಗರಕ್ಕೊಳಗಾದರೂ, ಪ್ರಿಯಾಂಕಾ ಅವರಿಗೆ ನಗು ತಡೆಯಲಾಗಲಿಲ್ಲ.
ಪ್ರಿಯಾಂಕಾ ಈ ಘಟನೆಯನ್ನು ಲಘುವಾಗಿ ಪರಿಗಣಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡು, "ನಾನು ಖಾಲಿ ಹೂಗುಚ್ಛವನ್ನು ಸ್ವೀಕರಿಸಿದ ರೀತಿಯಲ್ಲಿ ಮೋದಿ ಸರ್ಕಾರವು ಹೇಗೆ ಪೊಳ್ಳು ಭರವಸೆಗಳನ್ನು ನೀಡುತ್ತಿದೆ" ಎಂದು ಟೀಕಿಸಿದರು.
ಭಾರತೀಯ ಜನತಾ ಪಕ್ಷವು ಚುನಾವಣಾ ಸಮಯದಲ್ಲಿ "ಧರ್ಮ, ಜಾತಿ ಮತ್ತು ಸುಳ್ಳು ಘೋಷಣೆಗಳ ಪುಷ್ಪಗುಚ್ಛವನ್ನು" ನೀಡುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತದೆ. ಆದರೆ ಚುನಾವಣೆಯ ನಂತರ, ಈ ಪುಷ್ಪಗುಚ್ಛವು ನಿಜವಾಗಿಯೂ ಖಾಲಿಯಾಗಿದೆ ಎಂದು ಮತದಾರರು ಅರಿತುಕೊಳ್ಳುತ್ತಾರೆ" ಎಂದು ಗಾಂಧಿ ತಮ್ಮ ಚುನಾವಣಾ ಪ್ರಚಾರದ ಭಾಷಣದ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.