ಬೆಂಗಳೂರು, ಏಪ್ರಿಲ್ 15(AZM) : ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗ ಭೇಟಿಯ ಸಂದರ್ಭದಲ್ಲಿ ಅವರ ಪಡೆ ತಂದ ಬ್ಲ್ಯಾಕ್ ಟ್ರಂಕ್ ಇದೀಗ ಚರ್ಚೆಯಾಗುತ್ತಿದ್ದು, ಈ ಕುರಿತು ತನಿಖೆ ನಡೆಸಬೇಕೆಂದು ರಾಜ್ಯ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಇಂದು ದೂರು ಸಲ್ಲಿಸಿದೆ.
ಏಪ್ರಿಲ್ 9ರಂದು ನರೇಂದ್ರ ಮೋದಿ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದರು. ಎಸ್ಪಿಜಿ ಭದ್ರತೆ ಹೊಂದಿರುವ ಅವರು ಮೂರು ಹೆಲಿಕಾಪ್ಟರ್ ಎಸ್ಕಾರ್ಟ್ಗಳಲ್ಲಿ ಆಗಮಿಸಿದ್ದರು. ನರೇಂದ್ರ ಮೋದಿ ಅವರ ಹೆಲಿಪ್ಯಾಡ್ನಿಂದ ಕಪ್ಪು ಬಣ್ಣದ ಟ್ರಂಕ್ ಸಾಗಿಸಲಾಯಿತು. ಅದನ್ನು ಖಾಸಗಿ ಇನ್ನೋವಾ ಕಾರಿನಲ್ಲಿ ತೆಗೆದುಕೊಂಡು ಹೋಗಲಾಯಿತು ಎಂದು ಕಾಂಗ್ರೆಸ್ ದೂರಿನಲ್ಲಿ ಹೇಳಿದೆ.
ಎಸ್ಪಿಜಿ ಭದ್ರತೆ ಇರುವಾಗ ಅವರ ಒಪ್ಪಿಗೆ ಇಲ್ಲದೆ ಯಾರೂ ಹೆಲಿಪ್ಯಾಡ್ ಬಳಿ ಹೋಗುವಂತಿಲ್ಲ. ಆದರೆ, ಟ್ರಂಕ್ ಸಾಗಿಸಿದ ವ್ಯಕ್ತಿಗಳು ಎಸ್ಪಿಜಿ ಅವರು ಆಗಿರಲಿಲ್ಲ. ಅವರ ಸಾಮಾನ್ಯ ಜನರಂತೆ ಬಟ್ಟೆ ಧರಿಸಿದ್ದರು. ಯಾವುದೇ ಯೂನಿಫಾರ್ಮ್ ಇರಲಿಲ್ಲ. ಪೆಟ್ಟಿಯನ್ನು ಇನ್ನೋವಾ ಕಾರಿನಲ್ಲಿಟ್ಟು ವೇಗವಾಗಿ ಹೋಗಿದ್ದೇಕೆ? ಎಂದು ಕಾಂಗ್ರೆಸ್ ದೂರಿನಲ್ಲಿ ಪ್ರಶ್ನೆ ಮಾಡಿದೆ.
ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ತಂದ ಕಪ್ಪು ಬಾಕ್ಸ್ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ದೂರಿನಲ್ಲಿ ಮನವಿ ಮಾಡಿದ್ದು, ಬ್ಲಾಕ್ ಟ್ರಂಕ್ನಲ್ಲಿ ಏನಿತ್ತು? ಎಂಬುದನ್ನು ದೇಶದ ಜನರು ತಿಳಿಯಬೇಕು. ಇನ್ನೋವಾ ಕಾರು ಯಾರದ್ದು?, ಇನ್ನೋವಾ ಕಾರು ಎಲ್ಲಿಗೆ ಹೋಯಿತು? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ದೂರಿನಲ್ಲಿ ಮನವಿ ಮಾಡಿದೆ.
ಕೆಲವು ದಿನಗಳ ಹಿಂದೆ ಅರುಣಾಚಲ ಪ್ರದೇಶಕ್ಕೆ ನರೇಂದ್ರ ಮೋದಿ ಭೇಟಿ ನೀಡಿದ್ದರು. ಆಗ ಮುಖ್ಯಮಂತ್ರಿಗಳ ಬೆಂಗಾವಲು ಪಡೆ ವಾಹನದಲ್ಲಿ ಹಣ ಸಿಕ್ಕಿತ್ತು. ಪ್ರಧಾನಿ ಮೋದಿ ಹಣ ಸಾಗಣೆ ಮಾಡಲು ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಈ ಹಣದ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ದೂರಿನಲ್ಲಿ ಆರೋಪವನ್ನು ಮಾಡಿದೆ.
ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಬ್ಲಾಕ್ ಟ್ರಂಕ್ ಬಗ್ಗೆ ಸ್ಪಷ್ಟನೆ ನೀಡಿದ್ದು. 'ನರೇಂದ್ರ ಮೋದಿ ಸೆಕ್ಯುರಿಟಿ ವಿಭಾಗಕ್ಕೆ ಸೇರಿದ ವಸ್ತುಗಳು ಅದರಲ್ಲಿದ್ದವು. ಚುನಾವಣಾ ಆಯೋಗದ ಅಧಿಕಾರಿಗಳು ಅದನ್ನು ಪರಿಶೀಲನೆ ನಡೆಸಿದ್ದಾರೆ' ಎಂದು ಹೇಳಿದ್ದಾರೆ.