ನವದೆಹಲಿ, ಅ 31 (DaijiworldNews/MS): ಅಪರಾಜಿತಾ ರಾಯ್ ಸಿಕ್ಕಿಂನ ಮೊದಲ ಮಹಿಳಾ IPS ಅಧಿಕಾರಿಯಾಗಿದ್ದಾರೆ. ಡ್ರಗ್ಸ್ ಮತ್ತು ಚಿನ್ನ ಸೇರಿದಂತೆ ಅನೇಕ ಕಳ್ಳಸಾಗಣೆ ಪ್ರಕರಣಗಳನ್ನು ಬಯಲಿಗೆಳೆದ ಕೀರ್ತಿಯೂ ಅವರಿದ್ದು ದಕ್ಷ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದಾರೆ. ಅವರ ಬದುಕು ಅನೇಕರಿಗೆ ದಾರಿದೀಪವಾಗಿ ಹೊರಹೊಮ್ಮುತ್ತಿದೆ.
ಅಪರಾಜಿತಾ ರಾಯ್ ಅವರು ತಮ್ಮ ಐಪಿಎಸ್ ತರಬೇತಿಯ ಸಮಯದಲ್ಲಿ ಪೊಲೀಸ್ ಅಕಾಡೆಮಿಯಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 1958 ರ ಬ್ಯಾಚ್ ಐಪಿಎಸ್ ಆಫೀಸರ್ಸ್ ಟ್ರೋಫಿ ಅತ್ಯುತ್ತಮ ಮಹಿಳಾ ಒಔಟ್ ಡೋರ್ ಪ್ರೊಬೇಷನರ್, ಉಮೇಶ್ ಚಂದ್ರ ಟ್ರೋಫಿ ಫೀಲ್ಡ್ ಕಾಂಬ್ಯಾಟ್, 55 ನೇ ಬ್ಯಾಚ್ ಆಫ್ ಸೀನಿಯರ್ ಆಫೀಸರ್ಸ್ ಟ್ರೋಫಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಿ ಟ್ರೋಫಿ ಹೀಗೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಪರಾಜಿತಾ ರಾಯ್ ಅವರ ತಂದೆ ಜ್ಞಾನೇಂದ್ರ ರಾಯ್, ಸಿಕ್ಕಿಂನ ವಿಭಾಗೀಯ ಅರಣ್ಯಾಧಿಕಾರಿ. ಆದರೆ ಅಪರಾಜಿತಾ 8 ವರ್ಷದವಳಿದ್ದಾಗ ನಿಧನರಾದರು. ಮುಂದೆ ತಾಯಿಯ ರೋಮಾ ರಾಯ್ ಆರೈಕೆಯಲ್ಲಿ ಬೆಳೆದರು. ಸರ್ಕಾರಿ ನೌಕರರು ಸಾರ್ವಜನಿಕರಲ್ಲಿ ಸಂವೇದನಾರಹಿತವಾಗಿ ವರ್ತಿಸುವ ಬಗ್ಗೆಅವರಿಗೆ ಚಿಕ್ಕಂದಿನಿಂದಲೇ ಅರಿವಿತ್ತು. ಅದಕ್ಕಾಗಿಯೇ ಸರ್ಕಾರಿ ವ್ಯವಸ್ಥೆಯ ಭಾಗವಾಗಲು ನಿರ್ಧರಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡರು.
ಅಪರಾಜಿತಾ ರೈ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ಅವರು 2004 ರಲ್ಲಿ ICS ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 95 ಅಂಕಗಳೊಂದಿಗೆ ರಾಜ್ಯಕ್ಕೆ ಅಗ್ರಸ್ಥಾನ ಪಡೆದರು. ಅವರ ಶಾಲೆಯ ತಾಶಿ ನಮ್ಗ್ಯಾಲ್ ಅಕಾಡೆಮಿಯಲ್ಲಿ ಅತ್ಯುತ್ತಮ ಆಲ್ ರೌಂಡರ್ ವಿದ್ಯಾರ್ಥಿಗಾಗಿ ಸಂಸ್ಥಾಪಕರ ಪದಕವನ್ನು ಪಡೆದುಕೊಂಡಿದ್ದರು.
ಮಾಧ್ಯಮಿಕ ಶಿಕ್ಷಣದ ನಂತರ, ಅವರು ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು 2009 ರಲ್ಲಿ ಪಶ್ಚಿಮ ಬಂಗಾಳದ ನ್ಯಾಯಾಂಗ ವಿಜ್ಞಾನಗಳ ರಾಷ್ಟ್ರೀಯ ವಿಶ್ವವಿದ್ಯಾಲಯದಿಂದ BA LLB (ಆನರ್ಸ್) ಪದವಿಯನ್ನು ಪಡೆದರು. ಇಲ್ಲೂ ಕೂಡಾ ನ್ಯಾಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಎರಡರಲ್ಲೂ ಚಿನ್ನದ ಪದಕ ಬಾಚಿಕೊಂಡರು.
2009 ರಲ್ಲಿ ಮೊದಲ ಬಾರಿಗೆ UPSC ನಾಗರಿಕ ಸೇವೆಗಳ ಪರೀಕ್ಷೆಯನ್ನುಎದುರಿಸಿ ಕ್ಲಿಯರ್ ಮಾಡುವಲ್ಲಿ ವಿಫಲರಾಗಿದ್ದರು.ಅಪರಾಜಿತಾ ರಾಯ್ ಮತ್ತೊಮ್ಮೆ 2010 ರಲ್ಲಿ UPSC ನಾಗರಿಕ ಸೇವೆಗಳ ಪರೀಕ್ಷೆ ಎದುರಿಸಿದರು. ಈ ಬಾರಿ 768ನೇ ರ್ಯಾಂಕ್ ಪಡೆದಿದ್ದರು. ಆದರೆ ಇದರಿಂದ ಆಕೆ ತೃಪ್ತರಾಗದೇ ಮತ್ತೆ 2011ರಲ್ಲಿ ಯುಪಿಎಸ್ಸಿ ಸತತ ಮೂರನೇ ಬಾರಿ ಪರೀಕ್ಷೆ ಬರೆದಿದ್ದರು. ಈ ಬಾರಿ ಅಖಿಲ ಭಾರತ ಮಟ್ಟದಲ್ಲಿ 358ನೇ ಸ್ಥಾನ ಪಡೆದಿದರು. ಹೀಗಾಗಿ ಮೂರನೇ ಪ್ರಯತ್ನದಲ್ಲಿ ಐಪಿಎಸ್ ಆದರು.
ಐಪಿಎಸ್ ಅಪರಾಜಿತಾ ರಾಯ್ ಪಶ್ಚಿಮ ಬಂಗಾಳ ಕೇಡರ್ನ ಐಪಿಎಸ್ ಅಧಿಕಾರಿ. ಡ್ಯಾಶಿಂಗ್ ಪೊಲೀಸ್ ಅಧಿಕಾರಿ ಮಾತ್ರವಲ್ಲದೆ ಉತ್ತಮ ಕ್ರೀಡಾ ಪಟು ಕೂಡ. ಅವರು ಅಖಿಲ ಭಾರತ ಪೊಲೀಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ರನ್ನರ್ ಅಪ್ ಸ್ಥಾನವನ್ನೂ ಪಡೆದಿದ್ದಾರೆ. ಇದಲ್ಲದೇ ಡ್ರಗ್ಸ್, ಬಂಗಾರದಂತಹ ವಸ್ತುಗಳ ಕಳ್ಳಸಾಗಣೆ ಪ್ರಕರಣಗಳನ್ನು ಭೇದಿಸುವ ಮೂಲಕ ಸುದ್ದಿಯಾಗಿದ್ದಾರೆ. ಒಮ್ಮೆ ಅವರು ಕಾರ್ಪೊರೇಟ್ ಶೈಲಿಯ ಕಳ್ಳಸಾಗಣೆ ಸಿಂಡಿಕೇಟ್ ಅನ್ನು ಭೇದಿಸಿ ಸುದ್ದಿಯಾಗಿದ್ದರು.