ಹೈದರ್ಬಾದ್, ಅ.30 (DaijiworldNews/AK/SK): ತೆಲಂಗಾಣ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸಿದ್ದಿಪೇಟೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ವೇಳೆ ಆಪ್ತ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಸಂಸದ ಕೋಠಾ ಪ್ರಭಾಕರ್ ರೆಡ್ಡಿ ಮೇಲೆ ಅಪರಿಚಿತ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆ ನಡೆದಿದೆ.
ಸಿದ್ದಿಪೇಟೆ ಜಿಲ್ಲೆಯ ದೌಲ್ತಾಬಾದ್ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಪ್ರಭಾಕರ ರೆಡ್ಡಿ ಮತಪ್ರಚಾರ ಮಾಡುತ್ತಿದ್ದ ವೇಳೆ ಕುಟುಂಬವೊಂದನ್ನು ಭೇಟಿ ಮಾಡಿ ಹೊರಗೆ ಬರುತ್ತಿದ್ದಾಗ ಸಂಸದರಿಗೆ ಅಪರಿಚಿತ ಕೈ ನೀಡುವ ಸೋಗಿನಲ್ಲಿ ಬಂದು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ.
ಗಾಯಗೊಂಡ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಕುವಿನಿಂದ ಇರಿದ ವ್ಯಕ್ತಿಯನ್ನು ಸ್ಥಳೀಯರು ದಳಿಸಿದ್ದಾರೆ. ಅಲ್ಲದೇ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೂ ಆರೋಪಿ ಸ್ಥಳೀಯ ವರದಿಗಾರ ಎಂದು ವರದಿಯಾಗಿದೆ. ಆದರೆ ಆತ ನಕಲಿ ಐಡಿ ಕಾರ್ಡ್ ಮಾಡಿದ್ದನೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಸಿದ್ದಿಪೇಟೆ ಪೊಲೀಸ್ ಆಯುಕ್ತ ಎನ್.ಶ್ವೇತಾ ತಿಳಿಸಿದ್ದಾರೆ.
ನವೆಂಬರ್ 30 ರಂದು ನಡೆಯಲಿರುವ ಚುನಾವಣೆಗೆ ದುಬ್ಬಾಕ್ ವಿಧಾನಸಭಾ ಕ್ಷೇತ್ರದಿಂದ ಬಿಆರ್ಎಸ್ ಅಭ್ಯರ್ಥಿಯಾಗಿ ಪ್ರಭಾಕರ್ ರೆಡ್ಡಿ ಅವರು ಭಾರತೀಯ ಜನತಾ ಪಕ್ಷದ ರಘುನಂದನ್ ರಾವ್ ವಿರುದ್ಧ ಸ್ಪರ್ಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ನಂತರ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರ ರಾಜನ್ ಅವರು ಚುನಾವಣಾ ಸ್ಪರ್ಧಿಗಳ ಸುರಕ್ಷತೆಯನ್ನು ಕಾಪಾಡಲು ರಾಜ್ಯ ಡಿಜಿಪಿಗೆ ಆದೇಶ ನೀಡಿದ್ದಾರೆ.