ಬೆಳಗಾವಿ, ಎ15(SS): ಕೇಂದ್ರದಲ್ಲಿ ಬಿಜೆಪಿ ಬಂದರೂ, ಕಾಂಗ್ರೆಸ್ ಬಂದರೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ರಾಮ ಮಂದಿರ ಕಟ್ಟಬೇಕು. ಭಾವೈಕ್ಯತೆ ಆಧಾರದಲ್ಲಿ ಮಂದಿರ ಹಾಗೂ ಮಸೀದಿ ನಿರ್ಮಾಣವಾಗಲಿ. ರಾಮ ಮಂದಿರ ಪಕ್ಕದಲ್ಲೇ ಮಸೀದಿ ನಿರ್ಮಾಣ ಬೇಡ. ಸ್ವಲ್ಪ ದೂರದಲ್ಲಿ ಮಸೀದಿ ನಿರ್ಮಾಣ ಆದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ಮೂಲಕ ಸಮಸ್ಯೆಗೆ ಪರಿಹಾರ ದೊರೆಯಲಿ ಅಯೋಧ್ಯೆ ವಿವಾದ ಕೋರ್ಟ್ನಲ್ಲಿ ಇರುವುದರಿಂದ ರಾಮ ಮಂದಿರ ನಿರ್ಮಾಣ ತಡವಾಗಿದೆ ಎಂದು ಹೇಳಿದರು.
ಸರ್ಕಾರಗಳು ಹಿಂದೂ ಧರ್ಮದ ಆಧ್ಯಾತ್ಮಿಕ ಕೇಂದ್ರಗಳ ಮೇಲೆ ಹಸ್ತಕ್ಷೇಪ ಮಾಡುತ್ತಿವೆ. ಸರ್ಕಾರ ಎಲ್ಲ ಧರ್ಮಗಳ ಮೇಲೆ ಸಮಾನವಾಗಿ ಅಧಿಕಾರ ಚಲಾಯಿಸಲಿ. ವೀರಶೈವ ಲಿಂಗಾಯತ ಇಬ್ಬರೂ ಶಿವನ ಆರಾಧಕರು. ವೀರಶೈವ-ಲಿಂಗಾಯತ ಇಬ್ಬರೂ ಹಿಂದುಗಳು. ಯಾವುದೇ ಕಾರಣಕ್ಕೂ ಭಿನ್ನಾಭಿಪ್ರಾಯ ಬರಬಾರದು. ಹಾಗಾಗಿ ಅವರು ಹಿಂದುಗಳ ಒಂದು ಭಾಗವಾಗಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಯಾವುದೇ ಜಾತಿಯವರ ಮೇಲೆ ಬ್ರಾಹ್ಮಣರು ತಾರತಮ್ಯ ಮಾಡಿಲ್ಲ. ಪೇಜಾವರ ಮಠದ ವತಿಯಿಂದ ಬೆಂಗಳೂರು, ಹುಬ್ಬಳ್ಳಿ ಹಾಗೂ ಉಡುಪಿಯಲ್ಲಿ ಮೂರು ಶಿಕ್ಷಣ ಸಂಸ್ಥೆಗಳ ನಿರ್ಮಾಣ ಮಾಡಲಾಗುತ್ತದೆ. ಸಂಸ್ಥೆಗಳಲ್ಲಿ ಎಲ್ಲಾ ಧರ್ಮದವರಿಗೂ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.