ಲೂದಿಯಾನ, ಅ 27 (DaijiworldNews/HR): ಜೀವನದಲ್ಲಿ ಯಾವುದೇ ಕಷ್ಟ ಎದುರಾದರೂ ಕುಗ್ಗದೆ ಗುರಿಯನ್ನು ಮುಟ್ಟಲೇ ಬೇಕು ಎಂಬ ಛಲ ನಮ್ಮಲ್ಲಿ ಇದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಸ್ಪೂರ್ತಿ ಐಎಎಸ್ ಆಫೀಸರ್ ಡಾ ರಾಜ್ದೀಪ್ ಸಿಂಗ್ ಖೈರಾ.
ರಾಜ್ದೀಪ್ ಸಿಂಗ್ ಖೈರಾ ಅವರು 4 ಬಾರಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಆದರೂ ಛಲ ಬಿಡದ ಇವರು ಐದನೇ ಬಾರಿಗೂ ಸಿಎಸ್ಇ ಪರೀಕ್ಷೆ ಬರೆದಿದ್ದರೂ. ಅದರ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಬಳಿಕ ಸಂದರ್ಶನಕ್ಕೆ ಮುಂಚೆ ತಮ್ಮ ತಂದೆ ಕಳೆದುಕೊಂಡರೂ ಸಹ, ಕುಗ್ಗದೇ ಸಂದರ್ಶನಕ್ಕೆ ಹಾಜರಾಗಿ ಐಎಎಸ್ ಅಧಿಕಾರಿಯಾಗಿದ್ದಾರೆ.
ಇನ್ನು ಲೂದಿಯಾನ ಮೂಲದ ಡಾ ರಾಜ್ದೀಪ್ ಸಿಂಗ್ ಖೈರಾ, ನಿರಂತರವಾಗಿ 4 ವರ್ಷ ಕಠಿಣ ಪರಿಶ್ರಮ ಹಾಕಿ ಓದಿ ಕೊನೆಗೆ ಐದನೇ ಬಾರಿಗೆ 2020 ರಲ್ಲಿ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 495 ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿ ಆಗಿದ್ದಾರೆ.
ರಾಜ್ದೀಪ್ ಮೆಡಿಕಲ್ ಗ್ರಾಜುಯೇಟ್ ಆಗಿದ್ದು, ಮೊದಲಿಗೆ ಲೂಧಿಯಾನದ ಜಮಲ್ಪುರ್ ನ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು ಸಣ್ಣ ವಯಸ್ಸಿನಲ್ಲಿ ಇಟ್ಟುಕೊಂಡಿದ್ದ ಅವರು ಸತತ ಪ್ರಯತ್ನದಿಂದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಗೆದ್ದಿದ್ದಾರೆ.
ಯಾವುದೇ ಗುರಿಯನ್ನು ಮುಟ್ಟದೇ ಹಿಂದಿರುಗಬೇಡಿ. ಗುರಿ ಬಿಟ್ಟುಬಿಡುವುದು ಒಂದು ಆಯ್ಕೆ ಆಗಬಾರದು. ನಾವೆಲ್ಲರೂ ಸದಾ Never-Ending Attitude ಅನ್ನು ಇಟ್ಟುಕೊಳ್ಳಬೇಕು ಎಂದು ರಾಜ್ದೀಪ್ ಅವರು ಕಿವಿ ಮಾತು ನೀಡಿದ್ದಾರೆ.