ಬೆಳಗಾವಿ, ಏ 14(SM): ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯ ಮೊದಲು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದ ಬಗ್ಗೆ ಇದೀಗ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಹಾಗೂ ಮಸೀದಿ ಎರಡೂ ನಿರ್ಮಾಣವಾಗಲಿ ಎಂಬುವುದಾಗಿ ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು. ಅದರಲ್ಲಿ ಯಾವುದೇ ರಾಜಿಯಿಲ್ಲ. ಅದೇ ರೀತಿಯಲ್ಲಿ ಮಂದಿರದಿಂದ ಅಲ್ಪ ದೂರದಲ್ಲಿ ಮಸೀದಿಯೂ ಕೂಡ ನಿರ್ಮಾಣವಾಗಬೇಕಿದೆ. ಆ ಮೂಲಕ ಅಯೋಧ್ಯೆಯು ಭಾವೈಕ್ಯತೆ ತಾಣವಾಗಬೇಕು ಎಂದು ಹೇಳಿದರು.
ಮಂದಿರ ನಿರ್ಮಾಣ ಕಾರ್ಯ ಸ್ವಲ್ಪ ವಿಳಂಬವಾಗಿರುವುದು ನಿಜ. ಕೋರ್ಟ್ನಲ್ಲಿ ವಾದ ನಡೆಯುತ್ತಿರುವ ಕಾರಣ ತಡವಾಗಿದೆ. ಆದಷ್ಟು ಬೇಗ ಸಮಸ್ಯೆ ಇತ್ಯರ್ಥವಾಗಿ ಮಂದಿರ ನಿರ್ಮಾಣವಾಗಬೇಕು ಎಂದರು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಂದಿರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ ಒಂದು ಕಡೆ ಕೋರ್ಟ್ನಲ್ಲಿ ವಾದ ನಡೆಯುತ್ತಿದೆ. ಅದರ ಜತೆಯಲ್ಲೇ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆ ಇದೆ. ಇದೇ ಕಾರಣದಿಂದಾಗಿ ಮಂದಿರ ನಿರ್ಮಾಣ ಸಾಧ್ಯವಾಗುತ್ತಿಲ ಎಂದು ಶ್ರೀಗಳು ತಿಳಿಸಿದ್ದಾರೆ.