ಗುಜರಾತ್, ಅ 25 (DaijiworldNews/AK): ತಮ್ಮ ಕಠಿಣ ಪರಿಶ್ರಮದ ಮೂಲಕ ಅದೂ ಸಾಲದಿಂದ ವ್ಯವಹಾರ ಜಗತ್ತಿನಲ್ಲಿ ಯಶಸ್ವಿಯಾದ ಅನೇಕ ಉದ್ಯಮಿಗಳು ಬೆಳೆದು ನಿಂತಿರುವುದು ನಾವು ನೋಡಬಹದು. ಹಾಗೇನೇ ರಾಜೇಶ್ ಮೆಹ್ತಾ ಕೂಡ ಒಬ್ಬ ಯಶಸ್ಸಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.
ರಾಜೇಶ್ ಮೆಹ್ತಾ ಮೂಲತಃ ಗುಜರಾತಿನವರು. ಆದರೆ ಅವರ ವಿದ್ಯಾಭ್ಯಾಸವೆಲ್ಲ ಬೆಂಗಳೂರು. ಮೆಹ್ತಾ ಒಂದು ಕಾಲದಲ್ಲಿ ಅಂಗಡಿಗಳಿಗೆ ಹೋಗಿ ಚಿನ್ನದ ಆಭರಣಗಳನ್ನು ಮಾರಾಟ ಮಾಡುತ್ತ ಇದ್ದರು. ಈಗ ಭಾರತದ ಪ್ರಮುಖ ಚಿನ್ನ ರಫ್ತುದಾರರಾಗಿ ಗುರುತಿಸಿಕೊಂಡಿದ್ದಾರೆ. ರಾಜೇಶ್ ಮೆಹ್ತಾ ಕೇವಲ 10,000 ರೂ. ಸಾಲದಿಂದ ಚಿನ್ನದ ವ್ಯವಹಾರವನ್ನು ಪ್ರಾರಂಭಿಸಿದವರು. ಈಗ ಅವರ ವ್ಯಾಪಾರ ಸಾಮ್ರಾಜ್ಯವು ಈಗ 13,800 ಕೋಟಿ ರೂ.ಗೆ ಬೆಳೆದಿದೆ.
ಇಂದು ರಾಜೇಶ್ ಮೆಹ್ತಾ ರಾಜೇಶ್ ಎಕ್ಸ್ಪೋರ್ಟ್ಸ್ನ ಮಾಲೀಕರು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ. ಇವರು ಚಿನ್ನದ ಉತ್ಪನ್ನಗಳನ್ನು ಸಿದ್ದಪಡಿಸುವುದು ಮತ್ತು ಅವುಗಳನ್ನು ರಫ್ತು ಮಾಡುವುದರಲ್ಲಿ ಮುಂದಿದ್ದಾರೆ. ರಾಜೇಶ್ ಮೆಹ್ತಾ ಅವರ ಕಂಪನಿಯು ಚಿನ್ನದ ಆಭರಣಗಳ ಅಲ್ಲದೇ ಪದಕಗಳು ಮತ್ತು ನಾಣ್ಯಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಪ್ರವೀಣರು.
ರಾಜೇಶ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ನ ಉತ್ಪಾದನಾ ಘಟಕವು ಬರೋಬರಿ ಪ್ರತಿ ವರ್ಷ 400 ಟನ್ಗಳಷ್ಟು ಚಿನ್ನದ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಬಾಲ್ಯದಲ್ಲಿ, ರಾಜೇಶ್ ಮೆಹ್ತಾ ಅವರು ವೈದ್ಯರಾಗಲು ಬಯಸಿದ್ದರು. ಆದರೆ ಅವರ ಹಣೆಬರಹದಲ್ಲಿ ಬೇರೆ ಬರೆದಿತ್ತು ಎನ್ನಬಹುದು.
ಅವರ ತಂದೆ ಜಸ್ವಂತರಿ ಮೆಹ್ತಾ ಆಭರಣ ವ್ಯಾಪಾರಕ್ಕಾಗಿ ಕರ್ನಾಟಕಕ್ಕೆ ಬಂದಿದ್ದರು. ತನ್ನ ಅಧ್ಯಯನದ ಸಮಯದಲ್ಲಿ ಕೇವಲ 16 ನೇ ವಯಸ್ಸಿನಲ್ಲಿ ರಾಜೇಶ್ ತನ್ನ ಕುಟುಂಬದ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ತನ್ನ ತಂದೆ ಮತ್ತು ಅವನ ಅಣ್ಣನೊಂದಿಗೆ ಕೆಲಸಕ್ಕೆ ನೆರವಾಗಲು ಪ್ರಾರಂಭಿಸಿದರು.
ಮುಂದೆ ರಾಜೇಶ್ ಮೆಹ್ತಾ ಅವರು ವ್ಯಾಪಾರದಲ್ಲಿ ಏನಾದರೂ ದೊಡ್ಡದನ್ನು ಮಾಡಬೇಕೆಂದು ಬಯಸಿದರು. ಅವರು ತಮ್ಮ ಸಹೋದರನಿಂದ 2,000 ರೂ.ಗಳನ್ನು ಹಾಗೂ ಬ್ಯಾಂಕಿನಿಂದ 8,000 ರೂ. ಸಾಲವಾಗಿ ಪಡೆದರು. 1982 ರಲ್ಲಿ ಮೆಹ್ತಾ ಅವರು ಸಾಲ ಪಡೆದ ಹಣದಿಂದ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದರು.
ಮೊದಲು ರಾಜೇಶ್ ಮೆಹ್ತಾ ಚೆನ್ನೈನಿಂದ ಆಭರಣ ಖರೀದಿಸಿ ಗುಜರಾತ್ನ ರಾಜ್ ಕೋಟ್ ನಲ್ಲಿ ಮಾರಾಟ ಮಾಡುತ್ತಿದ್ದರು. ಬಳಿಕ ಗುಜರಾತ್ನಲ್ಲಿ ಸಗಟು ವ್ಯಾಪಾರಿಗಳಿಗೆ ಆಭರಣಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.
ನಂತರ ರಾಜೇಶ್ ಮೆಹ್ತಾ ತಮ್ಮ ವ್ಯವಹಾರವನ್ನು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ಗೆ ವಿಸ್ತರಿಸಿದರು. 1989 ರಲ್ಲಿ ಚಿನ್ನಾಭರಣ ಉದ್ಯಮಕ್ಕೆ ಪ್ರವೇಶಿಸಿ ಬೆಂಗಳೂರಿನ ತಮ್ಮ ಸಣ್ಣ ಗ್ಯಾರೇಜ್ನಲ್ಲಿ ಚಿನ್ನಾಭರಣ ತಯಾರಿಕಾ ಘಟಕವನ್ನು ಪ್ರಾರಂಭಿಸಿದರು. ಇದು ಅವರ ಜೀವನದಲ್ಲಿ ಮಹತ್ವದ ತಿರುವು ಪಡೆಯಿತು. ಸರಕುಗಳನ್ನು ತಯಾರಿಸಿ ಅವುಗಳನ್ನು ಬ್ರಿಟನ್, ದುಬೈ, ಓಮನ್, ಕುವೈತ್, ಅಮೇರಿಕಾ ಮತ್ತು ಯುರೋಪ್ಗೆ ರಫ್ತು ಮಾಡಿದರು. ಇಂದು ಮೆಹ್ತಾ ಒಬ್ಬ ಮಾದರಿ ಉದ್ಯಮಿಯಾಗಿ ಎಲ್ಲರ ಮನಗೆದ್ದಿದ್ದಾರೆ.