ಮೈಸೂರು,ಏ14(AZM): ನಾನು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಬಹಿರಂಗ ವೇದಿಕೆಯಲ್ಲೇ ಘೋಷಣೆ ಮಾಡಿದ್ದು, ಸೋಲಿನ ಮೂಲಕವೇ ಅವರು ಕ್ಷೇತ್ರ ಬಿಟ್ಟು ಕೊಟ್ಟರಾ ಎಂಬ ಪ್ರಶ್ನೆ ಮೂಡಿದೆ.
ಮೈಸೂರು ತಾಲೂಕಿನ ಜೈಪುರದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಬಹಿರಂಗ ವೇದಿಕೆಯಲ್ಲೇ ಈ ಘೋಷಣೆ ಮಾಡಿದ್ದಾರೆ. ಈ ಮೂಲಕ ಸೋಲಿನ ಮೂಲಕವೇ ಕ್ಷೇತ್ರವನ್ನು ಸಿದ್ದರಾಮಯ್ಯ ಬಿಟ್ಟು ಕೊಟ್ಟಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಋಣ ಮುಗಿಸಿದ್ರಾ ಸಿದ್ಧರಾಮಯ್ಯ ಎಂಬ ಮಾತು ಕೇಳಿ ಬಂದಿದೆ. ನಾನು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ. ನೀವೆಲ್ಲಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆಂದು ಸಿದ್ಧರಾಮಯ್ಯ ಹೇಳಿರುವುದು ಅವರ ಬೆಂಬಲಿಗರು ಕಾಂಗ್ರೆಸ್ ಹಾಗೂ ಜೆಡಿಎಸ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಇನ್ನು ಸಿದ್ದರಾಮಯ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲವೆಂದು ನಿರ್ಧರಿಸಿಯೇ ಸಚಿವ ಜಿಟಿ ದೇವೇಗೌಡ ಅವರೊಂದಿಗೆ ಜೊತೆಯಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಕಳೆದ ಚುನಾವಣೆಯಲ್ಲಿ ಸಿದ್ಧರಾಮಯ್ಯ, ಜಿ,ಟಿ. ದೇವೇಗೌಡ ಎದುರಾಳಿಗಳಾಗಿದ್ದರು. ಸಿದ್ಧರಾಮಯ್ಯ ಸೋತ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಜಿ.ಟಿ. ದೇವೇಗೌಡರೊಂದಿಗೆ ಅಂತರ ಕಾಯ್ದುಕೊಂಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೂ ಅವರು ಒಂದಾಗಿರಲಿಲ್ಲ, ಜಿಟಿಡಿ ಪ್ರಚಾರದಿಂದ ದೂರವೇ ಉಳಿದಿದ್ದರು. ಕೊನೆಗೆ ಒಂದಾಗಿ ಮೈತ್ರಿಕೂಟದ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. ಇಂದಿನಿಂದ ಅವರು ಜಂಟಿಯಾಗಿ ಪ್ರಚಾರ ಆರಂಭಿಸಿದ್ದು, ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.