ತಮಿಳುನಾಡು, 23 (DaijiworldNews/MS): ಬಿಜೆಪಿಯೊಂದಿಗಿನ ತನ್ನ 25 ವರ್ಷಗಳ ಒಡನಾಟವನ್ನು ಖ್ಯಾತ ನಟಿ ಗೌತಮಿ ತಡಿಮಲ್ಲ ಅವರು ಕೊನೆಗೊಳಿಸಿದ್ದಾರೆ. ತನಗೆ ದ್ರೋಹ ಮತ್ತು ಮೋಸ ಎಸಗಿದ ವ್ಯಕ್ತಿಯ ಪರವಾಗಿ ಪಕ್ಷ ನಿಂತಿದೆ ಎಂದು ಆರೋಪಿಸಿರುವ ನಟಿ, ಕೇಸರಿ ಪಕ್ಷದೊಂದಿಗಿನ ನಂಟನ್ನು ಕೊನೆಗೊಳಿಸಿದ್ದಾರೆ.
"ಇಂದು ನಾನು ನನ್ನ ಜೀವನದಲ್ಲಿ ಊಹೆ ಮಾಡಲಾಗದಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿಂತಿದ್ದೇನೆ. ನನಗೆ ಪಕ್ಷ ಮತ್ತು ಪಕ್ಷ ನಾಯಕರು ಬೆಂಬಲ ನೀಡುತ್ತಿಲ್ಲ ಎಂಬುವುದು ಅರ್ಥವಾಗಿದೆ. ಅತ್ಯಂತ ಭಾರವಾದ ಮನಸ್ಸು ಮತ್ತು ಭ್ರಮನಿರಸನದಿಂದ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನಾನು 25 ವರ್ಷಗಳ ಹಿಂದೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ನಿರ್ಧರಿಸಿ ಪಕ್ಷಕ್ಕೆ ಸೇರಿದ್ದೆ ಎಂದು ತಮಿಳುನಾಡಿನ ಹಿರಿಯ ನಟ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಲೆಟರ್ ನಲ್ಲಿ ಬರೆದುಕೊಂಡಿದ್ದಾರೆ.
“ನಾನು 17 ನೇ ವಯಸ್ಸಿನಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ವೃತ್ತಿಜೀವನವು 37 ವರ್ಷಗಳ ಕಾಲ ಸಿನಿಮಾ, ದೂರದರ್ಶನ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ವ್ಯಾಪಿಸಿದೆ. ಈ ವಯಸ್ಸಿನಲ್ಲಿ ಆರ್ಥಿಕವಾಗಿ ಸುಭದ್ರವಾಗಿರಲು ಮತ್ತು ನನ್ನ ಮಗಳ ಭವಿಷ್ಯಕ್ಕಾಗಿ ನಾನು ನನ್ನ ಇಡೀ ಜೀವನ ಕೆಲಸ ಮಾಡಿದ್ದೇನೆ. ನಾನು ಮತ್ತು ನನ್ನ ಮಗಳು ಸ್ಥಿರವಾಗಿ ಮತ್ತು ಸುರಕ್ಷಿತವಾಗಿರಬೇಕಾದ ಸ್ಥಳದಲ್ಲಿ ನಾನು ಈಗ ನಿಂತಿದ್ದೇನೆ. ಆದರೆ ಸಿ.ಅಳಗಪ್ಪನ್ ನನಗೆ ಮೋಸ ಮಾಡಿ ನನ್ನ ಹಣ, ಆಸ್ತಿ, ದಾಖಲೆಗಳನ್ನು ದೋಚಿದ್ದಾರೆ” ಎಂದು ಹೇಳಿದ್ದಾರೆ.
ವೇಲಾಚೇರಿಯಲ್ಲಿ ನೆಲೆಸಿರುವ ತಮ್ಮ ಪರಿಚಯಸ್ಥರಾದ ಸಿ.ಅಳಗಪ್ಪನ್ ಮತ್ತು ಅವರ ಪತ್ನಿ ನಾಚಲ್ ಅವರು 25 ಕೋಟಿ ರೂಪಾಯಿ ಮತ್ತು ಆಸ್ತಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗೌತಮಿ ಸೆಪ್ಟೆಂಬರ್ನಲ್ಲಿ ಪೊಲೀಸ್ ದೂರು ದಾಖಲಿಸಿದ್ದರು.