ಭೋಪಾಲ್, ಅ 21 (DaijiworldNews/AK):ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಟಿಕೆಟ್ ವಂಚಿತರಾಗಿರುವ ಆರು ಮಂದಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಪೈಕಿ ನಾಲ್ಕು ಮಂದಿ 2020ರ ನವೆಂಬರ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ಬೆಂಬಲಿಗರ ವಿರುದ್ಧ ಜಯ ಸಾಧಿಸಿದವರು.
ಸುಮವಲಿ ಶಾಸಕ ಅಜಾಬ್ ಸಿಂಗ್ ಕುಶ್ವಾಹ, ಬಿಯಾರೊ ಶಾಸಕ ರಾಮಚಂದ್ರ ಡಾಂಗಿ, ಗೋಹಡ್ ನ ಮೆವರಾಂ ಜಟವ್ ಮತ್ತು ಮೊರೇನಾ ಕ್ಷೇತ್ರದ ರಾಕೇಶ್ ರಾಕೇಶ್ ಮವೈ ಜತೆಗೆ ಬಾದನಗರ ಕ್ಷೇತ್ರದ ಮುರಲಿ ಮೊರ್ವಾಲ್ ಹಾಗೂ ಸೆಂಧವಾ ಕ್ಷೇತ್ರದ ಗ್ಯಾರ್ಸೈಲ್ ರಾವತ್ ಟಿಕೆಟ್ ವಂಚಿತರಾಗಿದ್ದಾರೆ.
ಈಗಾಗಲೇ ಪಕ್ಷ ನಡೆಸಿದ ಸಮೀಕ್ಷೆಯ ಅನ್ವಯ ಟಿಕೆಟ್ ಹಂಚಿಕೆ ಮಾಡಲಾಗಿದ್ದು, ಬಾದನಗರ ಕ್ಷೇತ್ರದಿಂದ ರಾಜೇಂದ್ರ ಸಿಂಗ್ ಸೋಳಂಕಿ ಮತ್ತು ಸೆಂಧ್ವಾ ಕ್ಷೇತ್ರದಿಂದ ಮೋಟು ಸೋಳಂಕಿ ಅವರನ್ನು ಕಣಕಣಕ್ಕೆ ಇಳಿಸಲಾಗಿದೆ ಎಂದು ಪಕ್ಷ ಸಮುಜಾಯಿಷಿ ನೀಡಿದೆ. ಸುಮಾವಲಿ ಕ್ಷೇತ್ರದಿಂದ ಕುಲದೀಪ್ ಸಿಕರವಾರ್ ಅವರು ಸ್ಪರ್ಧಿಸುತ್ತಿದ್ದು, ಬಿಯಾರೋ ಕ್ಷೇತ್ರದಿಂದ ಪುರುಷೋತ್ತಮ ಡಾಂಗಿ, ಗೊಹಾದಗೊಹಾದ್ ಕ್ಷೇತ್ರದಿಂದ ಕೇಶವ ದೇಶಾಯಿ ಅಧಿಕೃತ ಅಭ್ಯರ್ಥಿಗಳು. ಮೊರೇನಾ ಕ್ಷೇತ್ರದಿಂದ ರಾಜ್ಯ ಕಿಸಾನ್ ಕಾಂಗ್ರೆಸ್ ಮುಖ್ಯಸ್ಥ ದಿನೇಶ್ ಸಿಂಗ್ ಗುರ್ಜರ್ ಕಣಕ್ಕೆ ಇಳಿದಿದ್ದಾರೆ.
ನನಗೆ ಟಿಕೆಟ್ ನಿರಾಕರಿಸಲು ನಾನು ಮಾಡಿರುವ ತಪ್ಪಾದರೂ ಏನು ಎಂದು ರಾಕೇಶ್ ಮಾವೈ , ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರಿಗೆ ಪ್ರಶ್ನಿಸಿದ್ದಾರೆ.