ಗುಜರಾತ್, ಅ 21 (DaijiworldNews/HR): ಯಾವುದೇ ಸಾಧನೆ ಮಾಡಬೇಕಾದರೆ ಮನುಷ್ಯನಿಗೆ ಪರಿಶ್ರಮ ಮುಖ್ಯ ಹೀಗೆ ಅನೇಕ ಸವಾಲುಗಳನ್ನು ಎದುರಿಸಿ ಎರಡು ಬಾರಿ ಐಪಿಎಸ್ ಆಗಿ, ಮೂರನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಂಡ ಗುಜರಾತ್ ನಿವಾಸಿ ಕಾರ್ತಿಕ್ ಜಿವಾನಿ ಅವರ ಯಶಸ್ವಿನ ಕಥೆ ಇದಾಗಿದೆ.
ದೇಶದಲ್ಲೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ UPSCಯನ್ನು ಸತತ ಮೂರು ಬಾರಿ ಪಾಸ್ ಮಾಡಿರುವ ಕಾರ್ತಿಕ್ ಅವರು ಮೊದಲ ಎರಡು ಪ್ರಯತ್ನಗಳಲ್ಲಿ ಐಪಿಎಸ್ ಅಧಿಕಾರಿಯಾಗುತ್ತಾರೆ. ಆದರೆ IAS ಅಧಿಕಾರಿಯಾಗುವ ಆಸೆ ಬಿಡದ ಅವರು ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು ಕೊನೆಗೆ ಐಎಎಸ್ ಅಧಿಕಾರಿಯಾಗುತ್ತಾರೆ.
ಇನ್ನು ಕಾರ್ತಿಕ್ ಜೀವನಿ ಗುಜರಾತ್ ನ ಸೂರತ್ ನಿವಾಸಿಯಾಗಿದ್ದು, ಅವರು ಗುಜರಾತಿ ಭಾಷೆಯಲ್ಲಿ 8 ನೇ ತರಗತಿಯವರೆಗೆ ಅಧ್ಯಯನ ಮಾಡಿ ಇದಾದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರವೇಶ ಪಡೆದಿದ್ದರು. 12ನೇ ತರಗತಿಯಲ್ಲಿ ತೇರ್ಗಡೆಯಾದ ನಂತರ ಜೆಇಇ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್ ಆಗಿದ್ದ ಅವರು ಐಐಟಿ ಬಾಂಬೆಯಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ.
ಕಾರ್ತಿಕ್ ತನ್ನ ಇಂಜಿನಿಯರಿಂಗ್ ಓದುವ ಸಮಯದಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿ 2016 ರಿಂದ UPSC ಪರೀಕ್ಷೆಗೆ ತಯಾರಿ ಆರಂಭಿಸಿ 2018 ರಲ್ಲಿ 94ನೇ ರ್ಯಾಂಕ್ ಮತ್ತು 2019 ರಲ್ಲಿ 84 ನೇ ರ್ಯಾಂಕ್ ನೊಂದಿಗೆ IPS ಅಧಿಕಾರಿಯಾದರು.
ಆದರೆ ಕಾರ್ತಿಕ್ ಅವರಿಗೆ ಐಎಎಸ್ ಅಧಿಕಾರಿಯಾಗಬೇಕೆಂದು ಆಸೆ ಇದ್ದು, ಐಪಿಎಸ್ ತರಬೇತಿ ವೇಳೆ ರಜೆ ಪಡೆದು ಪರೀಕ್ಷೆಗೆ ತಯಾರಿ ನಡೆಸಿದ್ದರು.
ಇನ್ನು ಕಾರ್ತಿಕ್ ಜೀವನಿ 2020 ರಲ್ಲಿ ತಮ್ಮ ಮೂರನೇ ಪ್ರಯತ್ನದಲ್ಲಿ 8 ನೇ ರ್ಯಾಂಕ್ ಗಳಿಸಿ ಮೂಲಕ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಕಾರ್ತಿಕ್ ಜೀವನಿ ಅವರ ಈ ಪ್ರಯಾಣವು ದೇಶಾದ್ಯಂತ UPSC ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದೆ.