ನವದೆಹಲಿ,ಅ. 20 (DaijiworldNews/AK): ಸದನದಲ್ಲಿ ಪ್ರಶ್ನೆಗಾಗಿ ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ದರ್ಶನ್ ಹಿರಾನಂದಾನಿ ಅವರು ಸಂಸತ್ತಿನ ನೈತಿಕ ಸಮಿತಿಗೆ ಅಫಿಡವಿಟ್ ಸಲ್ಲಿಸಿದ್ದು, ಟಿಎಂಸಿ ಲೋಕಸಭೆ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಹಂಚಿಕೊಂಡಿದ್ದರು ಎಂದು ಹೇಳಿದ್ದಾರೆ.
ಗುರುವಾರ ಸಂಸತ್ತಿನ ನೈತಿಕ ಸಮಿತಿಯ ಮುಂದೆ ಅಫಿಡವಿಟ್ ಸಲ್ಲಿಸಿರುವ ಅವರು ಮಹುವಾ ಮೊಯಿತ್ರಾ ಪರವಾಗಿ ಪ್ರಶ್ನೆ ಪೋಸ್ಟ್ ಮಾಡಲು ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನೀಡಿದ್ದರು ಎಂದು ಉಲ್ಲೇಖಿಸಿದ್ದಾರೆ.
ದುಬಾರಿ ಐಷಾರಾಮಿ ವಸ್ತುಗಳನ್ನು ಉಡುಗೊರೆ, ಬಂಗಲೆಯ ನವೀಕರಣಕ್ಕೆ ಸಹಾಯ, ರಜಾ ದಿನಗಳ ಪ್ರಯಾಣ ವೆಚ್ಚ ಸೇರಿದಂತೆ ಮೊಯಿತ್ರಾ ಪದೇ ಪದೇ ಈಡೇರಿಸುವಂತೆ ಬೇಡಿಕೆಯನ್ನ ಇಡುತ್ತಿದ್ದರು ಮತ್ತು ಹಲವಾರು ಅನುಕೂಲಗಳನ್ನು ಕೇಳುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
ದರ್ಶನ್ ಹಿರಾನಂದಾನಿ ಅಫಿಡವಿಟ್ ಸಲ್ಲಿಸಿದ ಬಳಿಕ ಇದೀಗ ಮಹುವಾ ಮೊಯಿತ್ರಾ ಪ್ರತಿಕ್ರಿಯಿಸಿದ್ದು, ಸಿಬಿಐ ಮತ್ತು ನೈತಿಕ ಸಮಿತಿಯ ಸದಸ್ಯರು ನನ್ನನ್ನು ಕರೆದರೆ ಮತ್ತು ಕೇಳಿದಾಗ ಉತ್ತರಿಸಲು ನಾನು ಸಿದ್ದನಿದ್ದೇನೆ. ಅದಾನಿ ನಿರ್ದೇಶನದ ಮಾಧ್ಯಮ ಸರ್ಕಸ್ ವಿಚಾರಣೆಗೆ ಅಥವಾ ಬಿಜೆಪಿ ಟ್ರೋಲ್ಗಳಿಗೆ ಉತ್ತರಿಸಲು ನನಗೆ ಸಮಯ ,ಆಸಕ್ತಿ ಇಲ್ಲ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿಲಾಗಿತ್ತು.