ವಿಜಯಪುರ, 20 (DaijiworldNews/HR): ಈ ಬಾರಿ ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿರುವುದರಿಂದ ವಿದ್ಯುತ್ ಅಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲೋಡ್ ಶೆಡ್ಡಿಂಗ್ ಶಾಕ್ ನೀಡದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ ವಿದ್ಯುತ್ ವಿತರಣಾ ಘಟಕದ ಆವರಣಕ್ಕೆ ಮೊಸಳೆ ತಂದು ಬಿಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ್ ಗ್ರಾಮದಲ್ಲಿ ನಡೆದಿದೆ.
ಪ್ರತಿಭಟನೆ ನಡೆಸಿ ಮಾತನಾಡಿದ ರೈತರು, ಲೋಡ್ ಶೆಡ್ಡಿಂಗ್ ನಿಂದಾಗಿ ರೈತರಿಗೆ ಕಷ್ಟವಾಗುತ್ತಿದ್ದು, ರಾತ್ರಿಯ ವೇಳೆ ಕತ್ತಲೆಯಲ್ಲಿ ಜಲಚರ ಪ್ರಾಣಿಗಳಿಂದ ತೊಂದರೆ ಇದೆ ಎಂದರು ಕೂಡ ಅಧಿಕಾರಿಗಳು ಕೇಳುತ್ತಿಲ್ಲ. ರಾತ್ರಿ ವೇಳೆ ಕರೆಂಟ್ ನೀಡಿದರೆ ನಾವೇನು ಮಾಡೋದು, ನಮ್ಮ ಸಮಸ್ಯೆ ಅಧಿಕಾರಿಗಳಿಗೆ ಅರ್ಥವಾಗಲಿ ಎಂದು ಮೊಸಳೆಯನ್ನ ತಂದಿದ್ದೇವೆ ಎಂದರು.
ಇನ್ನು ನಿನ್ನೆ ರಾತ್ರಿ ಪಾಳಿಯಲ್ಲಿ ನೀರು ಉಣಿಸುವಾಗ ಹೊಲದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಅದೇ ಮೊಸಳೆಯನ್ನ ಹಿಡಿದು ಟ್ರ್ಯಾಕ್ಟರ್ ಮೂಲಕ ವಿದ್ಯುತ್ ವಿತರಣಾ ಕೇಂದ್ರಕ್ಕೆ ತಂದ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ರೈತರ ಮನವೊಲಿಸಿ ಮೊಸಳೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.