ಬೆಂಗಳೂರು,ಏ14(AZM) :ಚುನಾವಣಾ ಪ್ರಚಾರಕ್ಕಾಗಿ ಅನುಮತಿಯಿಲ್ಲದೆ 21 ಬೈಕ್ ಗಳಲ್ಲಿ ಪ್ರಚಾರ ಕೈಗೊಂಡ ಹಿನ್ನಲೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ.
ಏ. 11 ರಂದು ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲು ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಮೂರು ವಾಹನಗಳಿಗೆ ಅನುಮತಿ ಕೋರಿದ್ದರು. ಆದರೆ, ಪ್ರಚಾರದಲ್ಲಿ ಹೆಚ್ಚುವರಿಯಾಗಿ 21 ಬೈಕ್ ಗಳನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಚುನಾವಣಾಧಿಕಾರಿ ಅಮೃತಾ ಸಾಯಿ ನೀಡಿದ ದೂರು ಆಧರಿಸಿ ರಾಜಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕಾಶ್ ರಾಜ್ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. 21 ಬೈಕ್ ಗಳನ್ನು ಜಪ್ತಿ ಮಾಡಿ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.