ಬೆಂಗಳೂರು, ಅ 17 (DaijiworldNews/MS): ಬಿಜೆಪಿಯವರು ಕಳೆದ ಮೂರು ತಿಂಗಳಿಂದ ಕುಮಾರಸ್ವಾಮಿ ಅವರ ಆಡಿಷನ್ ಮಾಡುತ್ತಿದೆ. ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೇಗೆ ವಾಗ್ದಾಳಿ ಮಾಡುತ್ತಾರೆ ಎಂಬುದರ ಆಧಾರದ ಮೇಲೆ ಮುಂದೆ ಅವರಿಗೆ ಬಿಜೆಪಿಯಲ್ಲಿ ಯಾವ ಹುದ್ದೆ ನೀಡಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದ್ದರೆ, ಯಾರದೋ ಮೇಲಿನ ಐಟಿ ದಾಳಿಗೆ ಕಾಂಗ್ರೆಸ್ ಜತೆ ನಂಟು ಹಾಕುತ್ತಿರುತ್ತಿರಲಿಲ್ಲ. ಇವರ ನಾಟಕವನ್ನು ಜನ ನೋಡುತ್ತಿದ್ದಾರೆ. ಅವರು ಮುಟ್ಟಾಳರಲ್ಲ. ಈಗಾಗಲೇ ಅವರು ಕಳೆದ ಚುನಾವಣೆಯಲ್ಲಿ ಪಾಠ ಕಲಿಸಿದ್ದು, ಲೋಕಸಭೆ ಚುನಾವಣೆಯಲ್ಲೂ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಐಟಿ ಇಲಾಖೆ ಹೇಳಿಕೆಯಲ್ಲಿ ತೆರಿಗೆ ವಂಚನೆ ಉದ್ದೇಶದಿಂದ ಕೆಲವು ಗುತ್ತಿಗೆದಾರರು, ವಾಸ್ತುಶಿಲ್ಪಿಗಳು ಹಣವನ್ನು ವೈಟ್ ಮಾತ್ರವಲ್ಲದೇ, ಡಿಜಿಟಲ್ ಮಾರ್ಗದಲ್ಲಿ ವ್ಯವಹಾರ ಮಾಡದೇ, ನಗದಿನ ರೂಪದಲ್ಲಿ ವ್ಯವಹಾರ ಮಾಡಿದ್ದಾರೆ. ಐಟಿ ಇಲಾಖೆ ಸ್ಪಷ್ಟ ಹೇಳಿಕೆ ನೀಡಿದ ನಂತರವೂ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಅವರಿಗೆ ಮರ್ಯಾದೆ ಇದೆಯಾ ಎಂದು ಹೇಳಿದ್ದಾರೆ.
ಬಿಜೆಪಿಯ ಒಕ್ಕಲಿಗ ಸಮುದಾಯದ ಮುಖಂಡರುಗಳ ಜತೆ ಸೇರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಕುಟುಂಬವನ್ನು ಮುಗಿಸಲು ಹೊಂಚು ಹಾಕುತ್ತಿದ್ದಾರೆ. ನಾಳೆ ಏನಾದರೂ ಶಿವಕುಮಾರ್ ಅವರಿಗೆ ತೊಂದರೆ ಆದರೆ ಕುಮಾರಸ್ವಾಮಿ, ಸಿ.ಟಿ ರವಿ, ಅಸ್ವತ್ಥ್ ನಾರಾಯ, ಆರ್ ಅಶೋಕ್ ಅವರೇ ನೇರ ಕಾರಣ. ಶಿವಕುಮಾರ್ ಅವರು ಡಿಸಿಎಂ ಆಗಿರುವುದನ್ನು ಸಹಿಸಲು ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ