ಬೆಂಗಳೂರು, ಏ 13(SM): ಜನತೆ ನೀಡಿದ ಮತಗಳಿಂದ ಭಾರತವು ಇಂದು ವಿದೇಶಗಳಲ್ಲಿ ತಲೆ ಎತ್ತಿ ನಡೆಯುವಂತಾಗಿದೆ. ವಿಶ್ವದ ಎಲ್ಲಾ ರಾಷ್ಟ್ರಗಳಿಂದ ಭಾರತಕ್ಕೆ ಅತ್ಯಧಿಕ ಗೌರವ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು. ಗಾಂಧಿ ಕುಟುಂಬದವರು ತಮ್ಮ ಕುಟುಂಬ ಸದಸ್ಯರಿಗೆ ಹಲವು ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಆದರೆ ಸೈನ್ಯ ಕೇಳಿದ್ದ ಬುಲೆಟ್ ಪ್ರೂಫ್ ಜಾಕೆಟ್ ಕೂಡ ಕಾಂಗ್ರೆಸ್ ನೀಡಿಲ್ಲ. ಸೈನಿಕರಿಗೆ ಯಾವುದೇ ಸಮರ್ಪಕ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಇನ್ನು ಕಾಂಗ್ರೆಸ್ನ ಪ್ರಣಾಳಿಕೆಯನ್ನು ಕಠಿಣ ಮಾತುಗಳಲ್ಲಿ ಪ್ರಧಾನಿ ಮೋದಿ ಟೀಕಿಸಿದರು. ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಭಾಷೆಯಲ್ಲಿದೆ. ಸೈನಿಕರಿಗೆ ನೀಡಿರುವ ವಿಶೇಷ ಅಧಿಕಾರವನ್ನು ಹಿಂದಕ್ಕೆ ಪಡೆಯುತ್ತೇವೆ ಎಂಬುವುದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ. ಕಾಶ್ಮೀರದಿಂದ ಸೈನ್ಯವನ್ನು ವಾಪಸ್ ಪಡೆಯುತ್ತೇವೆ ಎಂದಿದ್ದಾರೆ. ಇದೆಲ್ಲ ಪಾಕಿಸ್ತಾನ ಮಾತನಾಡುವ ಭಾಷೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.