ರಾಜಸ್ಥಾನ, ಅ 16 (DaijiworldNews/HR): ಯಾವುದೇ ಸಾಧನೆಗೆ ಶ್ರೀಮಂತಿಗೆ ಮುಖ್ಯವಲ್ಲ. ಬದಲಾಗಿ ಸಾಧಿಸಬೇಕೆಂಬ ಛಲ, ಆತ್ಮವಿಶ್ವಾಸ ಇದ್ದರೆ ಜಗತ್ತನ್ನೆ ಗೆಲ್ಲಬಹುದು. ತನ್ನ ಎಂಟನೇ ವಯಸ್ಸಿನಲ್ಲೇ ಬಾಲ್ಯ ವಿವಾಹಕ್ಕೆ ಬಲಿಯಾಗಿ ಬಡತನ ಮೆಟ್ಟಿ ನಿಂತು ಅತ್ಯಂತ ಕಷ್ಟಕರವಾದ ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ರೂಪಾ ಯಾದವ್ ಅವರ ಯಶೋಗಾಥೆ ಇದಾಗಿದೆ.
ರಾಜಸ್ಥಾನ ಮೂಲದ ರೂಪಾ ಯಾದವ್ ಅವರಿಗೆ ಬಾಲ್ಯದಿಂದಲೂ ವೈದ್ಯೆಯಾಗಬೇಕು ಎಂಬ ಕನಸು ಇತ್ತು. ಆದರೆ ತೀರಾ ಬಡತನ ಕುಟುಂಬದಲ್ಲಿ ಜನಿಸಿದ್ದ ಅವರಿಗೆ ಎಂಟನೇ ವಯಸ್ಸಿನಲ್ಲಿ ಬಾಲ್ಯ ವಿವಾಹವಾಗಿದ್ದು, ಆಕೆಯ ಪತಿಗೆ ಆಗ 12 ವರ್ಷ. ಆದರೆ ಸತತ ಪರಿಶ್ರಮದಿಂದ ರೂಪಾ ಮನೆ ಕೆಲಸ, ಪತಿಯ ಮನೆಯವರನ್ನು ನಿರ್ವಹಿಸುತ್ತ ತನ್ನ ಶಾಲೆಯನ್ನು ಪೂರ್ಣಗೊಳಿಸುತ್ತಿದ್ದಳು.
ಇನ್ನು ರೂಪಾ ಅವರ ಕಲಿಕೆಯ ಆಸಕ್ತಿ ನೋಡಿ ಆಕೆಯ ಪತಿ ಮತ್ತು ಸೋದರಮಾವ ಬೆಂಬಲಿಸಲು ನಿರ್ಧರಿಸಿದರು. ಜೊತೆಗೆ ಆಕೆಯ ಸಹೋದರ ಕೂಡ ಪುಸ್ತಕಗಳನ್ನು ಖರೀದಿಸಲು ಸಹಾಯ ಮಾಡುತ್ತಾನೆ.
ಇದೇ ರೀತಿ ಎಲ್ಲರ ಸಹಾಯ ಮಾಡಿ ರೂಪಾ ಯಾದವ್ ಅವರನ್ನು ವೈದ್ಯಕೀಯ ಪ್ರವೇಶ ಕೋಚಿಂಗ್ಗಾಗಿ ಕೋಟಾಕ್ಕೆ ಕಳುಹಿಸಿದರು.
ರೂಪಾ ಅವರು NEET 2017 ಪರೀಕ್ಷೆಗೆ ಹಾಜರಾಗಿ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅವರ ಕುಟುಂಬದ ಮೊದಲ ವೈದ್ಯರಾದರು.
ಇನ್ನು NEET 2017 ಪರೀಕ್ಷೆಯಲ್ಲಿ 720 ರಲ್ಲಿ 603 ಅಂಕಗಳನ್ನು ಗಳಿಸಿ 2,612 ರ್ಯಾಂಕ್ ಗಳಿಸುವ ಮೂಲಕ ಅನೇಕರಿಗೆ ಮಾದರಿಯಾದರು.