ಹೊಸದಿಲ್ಲಿ,ಅ 14 (DaijiworldNews/AK): ಮದ್ರಾಸ್ ಮತ್ತು ಮಣಿಪುರ ಹೈಕೋರ್ಟ್ ಗಳಿಗೆ ಮೂವರು ನ್ಯಾಯಮೂರ್ತಿಗಳನ್ನು ಕೇಂದ್ರ ಸರ್ಕಾರ ಶುಕ್ರವಾರ ನೇಮಕ ಮಾಡಿದೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆಯರೊಬ್ಬರು ಮಣಿಪುರ ಹೈಕೋರ್ಟ್ಗೆ ಮೊದಲ ಬಾರಿಗೆ ನೇಮಕಗೊಳ್ಳುವ ಮೂಲಕ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಕೇಂದ್ರದಿಂದ ತೆರವುಗೊಳಿಸಲಾದ ಇತರ ಎರಡು ಹೆಸರುಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿ ಹಾಗೂ ಮತ್ತೊಬ್ಬರು ಇತರ ಹಿಂದುಳಿದ ವರ್ಗಕ್ಕೆ ಸೇರಿದವರು. ಇದು ಉನ್ನತ ನ್ಯಾಯಾಂಗದಲ್ಲಿ ದಮನಕ್ಕೆ ಒಳಗಾದ ವರ್ಗಗಳಿಗೆ ಪ್ರಾತಿನಿಧ್ಯ ನೀಡುವ ಮೂಲಕ ಸಾಮಾಜಿಕ ವೈವಿಧ್ಯತೆಯನ್ನು ತರುವ ಪಯತ್ನವಾಗಿದೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಈ ಮೂವರು ನ್ಯಾಯಮೂರ್ತಿಗಳ ನೇಮಕವನ್ನು ಎಕ್ಸ್ ನಲ್ಲಿ ಪ್ರಕಟಿಸಿದ್ದಾರೆ. ಸದ್ಯದಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಲಿದ್ದಾರೆ.
ಮಣಿಪುರ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಳ್ಳಲು ನ್ಯಾಯಾಂಗ ಅಧಿಕಾರಿ ಗೊಲ್ಮೆಯ್ ಗೈಫುಲ್ಶಿಲ್ಲು ಕಬುಯಿ ಅವರನ್ನು ನೇಮಕ ಮಾಡುವ ಅಧಿಸೂಚನೆಯು ಜನವರಿ 10 ರಿಂದ ಬಾಕಿ ಉಳಿದಿದೆ. ಇಬ್ಬರು ವಕೀಲರಾದ ಎನ್ ಸೆಂಥಿಲ್ಕುಮಾರ್ ಮತ್ತು ಜಿ ಅರುಲ್ ಮುರುಗನ್ ಅವರನ್ನು ಮದ್ರಾಸ್ ಹೈಕೋರ್ಟ್ನಲ್ಲಿ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು.
ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಕೊಲಿಜಿಯಂ ಜುಲೈನಲ್ಲಿ ಅವರ ಹೆಸರನ್ನು ಶಿಫಾರಸು ಮಾಡಿತ್ತು.