ಬೆಂಗಳೂರು, ಅ 14 (DaijiworldNews/HR): ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ(ಕೆಎಸ್ಆರ್ಟಿಸಿ) 2000 ಹೆಚ್ಚುವರಿ ಬಸ್ಗಳನ್ನು ನಿಯೋಜನೆ ಮಾಡಿದ್ದು, ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗಿದೆ.
ಸಾಲು ಸಾಲಾಗಿ ಹಬ್ಬಗಳು ಬರುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳುತ್ತಿರುವುದರಿಂದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಸ್ ನಿಲ್ದಾಣದಿಂದ ಹೆಚ್ಚಿನ ಬಸ್ ಸೇವೆಗಳನ್ನ ಒದಗಿಸಲಾಗಿದೆ.
ಇದರ ಜೊತೆಗೆ ಮಂಗಳೂರು, ಮಡಿಕೇರಿ, ಶಿವಮೊಗ್ಗ, ದಾವಣಗೆರೆ, ಗೋಕರ್ಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಕೂಡ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸಲು ಸಾರಿಗೆ ಸಂಸ್ಥೆ ಸೂಚಿಸಿದೆ.
ಇನ್ನು ಚೆನ್ನೈ, ಊಟಿ, ಕೊಡೈಕನಾಲ್, ಮಧುರೈ, ಪಣಜಿ ಸೇರಿದಂತೆ ಅಂತರ್ ರಾಜ್ಯದಿಂದಲೂ ಹೆಚ್ಚುವರಿ ಬಸ್ ಗಳ ನಿಯೋಜನೆ ಮಾಡಲಾಗಿದ್ದು, ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿಯನ್ನು ನೀಡುವ ಮೂಲಕ ಪ್ರಯಾಣಿಕರಲ್ಲಿ ಸಂತಸ ತಂದಿದೆ.
ಒಂದೇ ಬಾರಿಗೆ 4ಕ್ಕಿಂತ ಹೆಚ್ಚಿನ ಟಿಕೆಟ್ ಖರೀದಿಸಿದ್ದಲ್ಲಿ 5% ರಿಯಾಯಿತಿ ನೀಡಲಾಗುತ್ತಿದ್ದು, ಹೋಗುವಾಗ ಮತ್ತು ಬರುವಾಗ ಟಿಕೆಟ್ ಒಟ್ಟಿಗೆ ಕಾಯ್ದಿರಿಸಿದಲ್ಲಿ 10% ರಿಯಾಯಿತಿ ನೀಡುವುದಾಗಿ ಕೆ ಎಸ್ ಆರ್ ಟಿಸಿ ನಿಗಮವು ತಿಳಿಸಿದೆ. ಈ ಹೆಚ್ಚುವರಿ ಬಸ್ ಗಳ ಸೇವೆಯು ಅ.20ರಿಂದ 26ರವರೆಗೆ ಕಾರ್ಯರೂಪದಲ್ಲಿರುತ್ತವೆ ಎಂದು ಸಾರಿಗೆ ನಿಗಮವು ತಿಳಿಸಿದೆ.