ತಮಿಳುನಾಡು, ಅ 13 (DaijiworldNews/HR): ಯಾವುದೇ ಸಾಧನೆಗೆ ಶ್ರೀಮಂತಿಗೆ ಮುಖ್ಯವಲ್ಲ. ಬದಲಾಗಿ ಸಾಧಿಸಬೇಕೆಂಬ ಛಲ, ಆತ್ಮವಿಶ್ವಾಸ ಇದ್ದರೆ ಜಗತ್ತನ್ನೆ ಗೆಲ್ಲಬಹುದು ಎಂಬುದಕ್ಕೆ ಕ್ಯಾಬ್ ಚಾಲಕನ ಮಗಳು ಐಎಎಸ್ ಅಧಿಕಾರಿಯಾಗಿರುವುದೇ ಸಾಕ್ಷಿ.
ಈಕೆಯ ಹೆಸರು ವನ್ಮತಿ ಇವರ ಸಾಧನೆ ಅನೇಕರಿಗೆ ಸ್ಪೂರ್ತಿದಾಯಕ. 2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ 152ನೇ ರ್ಯಾಂಕ್ ಪಡೆದ ವನ್ಮತಿಯವರು ತಮಿಳುನಾಡಿನ ಈರೋಡ್ನಲ್ಲಿ ಬಡಕುಟುಂಬದಲ್ಲಿ ಹುಟ್ಟಿ ಬೆಳೆದು ತನ್ನ ಆರಂಭಿಕ ದಿನಗಳಲ್ಲಿ ಅನೇಕ ಕೆಲಸಗಳನ್ನು ಮಾಡುತ್ತ ಕುಟುಂಬ ನಿರ್ವಹಣೆ ಮಾಡುತ್ತಿದ್ದರು.
ವನ್ಮತಿ ಅವರಿಗೆ ಐಎಎಸ್ ಅಧಿಕಾರಿಯಾಗಬೇಕೆಂದು ಪ್ರೇರೆಪಿಸಿದ್ದು ತಮ್ಮ ಊರಿನ ಜಿಲ್ಲಾಧಿಕಾರಿಯಾಗಿ ಬಂದಿದ್ದ ಮಹಿಳೆ ಹಾಗೂ ಗಂಗಾ ಯಮುನಾ ಸರಸ್ವತಿ ಎಂಬ ಟಿವಿ ಕಾರ್ಯಕ್ರಮ. ಇದರಲ್ಲಿ ನಾಯಕಿ ನಟಿ ಐಎಎಸ್ ಅಧಿಕಾರಿಯಾಗಿದ್ದರು.
ಜಿಲ್ಲಾಧಿಕಾರಿ ಮತ್ತು ಟಿವಿ ಕಾರ್ಯಕ್ರಮದಿಂದ ಪ್ರೇರೆಪಿತರಾಗಿದ್ದ ವನ್ಮತಿ ಅವರು ಅನೇಕ ಸವಾಲುಗಳ ನಡುವೆ ಓದಿನ ಕಡೆ ಗಮನ ಹರಿಸಿ ಯುಪಿಎಸ್ಸಿಗಾಗಿ ಸತತ ಪರಿಶ್ರಮಪಟ್ಟರು.
ಯುಪಿಎಸ್ಸಿ ಪರೀಕ್ಷೆಗೆ ಅಧ್ಯಯನ ಮಾಡುವಾಗ ಸ್ವತಃ ತಾವೆ ಕೆಲಸ ಮಾಡಿ ಮತ್ತು ತನ್ನ ಕುಟುಂಬವನ್ನು ನೋಡಿಕೊಳ್ಳುವುದರ ಜೊತೆಗೆ ಕಂಪ್ಯೂಟರ್ ಅಪ್ಲಿಕೇಶನ್ಗಳ ಮೂಲಕ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.
ಇನ್ನು ವನ್ಮತಿಯವರಿಗೆ ಯುಪಿಎಸ್ಸಿಯ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಆದರೆ ಸತತ ಪ್ರಯತ್ನ ಬಿಡದ ಅವರು, ಎರಡನೇ ಪ್ರಯತ್ನದಲ್ಲಿ 152ನೇ ರ್ಯಾಂಕ್ ಗಳಿಸಿದ್ದಾರೆ.