ಹಾಸನ, ಏಪ್ರಿಲ್ 13(AZM): ಹಾಸನ ಲೋಕಸಭೆ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ನಾಮಪತ್ರವನ್ನು ಮರುಪರಿಶೀಲಿಸುವಂತೆ ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಚುನಾವಣಾಧಿಕಾರಿಗೆ ನೋಟಿಸ್ ನೀಡಿದೆ.
ಪ್ರಜ್ವಲ್ ಅವರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆಸ್ತಿ ವಿವರಗಳನ್ನು ಮರೆಮಾಚಿ ತಪ್ಪು ಮಾಹಿತಿ ಒದಗಿಸಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರನ್ನು ಪರಿಶೀಲಿಸಿದ ಆಯೋಗವು ಈ ಬಗ್ಗೆ ವಿಚಾರಣೆ ನಡೆಸುವಂತೆ ಜಿಲ್ಲಾ ಚುನಾವಣಾಧಿಕಾರಿಗೆ ನೋಟಿಸ್ ನೀಡಿದೆ. ವಿವಿಧ ಕಂಪೆನಿಗಳಲ್ಲಿ ಪ್ರಜ್ವಲ್ ರೇವಣ್ಣ ಪಾಲುದಾರಿಕೆ ಹೊಂದಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆ ವೇಳೆ ನೀಡಿದ ಆಸ್ತಿ ವಿವರಗಳಲ್ಲಿ ಇದರ ಬಗ್ಗೆ ಮಾಹಿತಿ ಒದಗಿಸಿಲ್ಲ ಎಂದು ಆರೋಪಿಸಲಾಗಿದೆ. ಇದಕ್ಕೂ ಮೊದಲು ಬಿಜೆಪಿ ಅಭ್ಯರ್ಥಿ ಎ. ಮಂಜು ಕೂಡ ಪ್ರಜ್ವಲ್ ಅವರ ಆಸ್ತಿ ವಿವರದ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದರು.
ಪ್ರಜ್ವಲ್ ಅವರು ಎರಡು ಖಾಸಗಿ ಕಂಪೆನಿಗಳಲ್ಲಿ ಷೇರುಗಳನ್ನು ಹೊಂದಿದ್ದು, ಅವುಗಳ ಕುರಿತು ಆಸ್ತಿ ವಿವರದಲ್ಲಿ ಉಲ್ಲೇಖಿಸದೆ ವಂಚಿಸಿದ್ದಾರೆ. ಹೀಗಾಗಿ ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಅವರು ಆಗ್ರಹಿಸಿದ್ದರು.