ನವದೆಹಲಿ, ಅ 13 (DaijiworldNews/HR): ಯಾವುದೇ ಸಾಧನೆ ಮಾಡುವುದಕ್ಕೆ ವಯಸ್ಸು ಮುಖ್ಯವಲ್ಲ ಬದಲಾಗಿ ನಮ್ಮಲ್ಲಿ ಸತತ ಪ್ರಯತ್ನ ಇದ್ದರೆ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ಕೇವಲ 16ನೇ ವಯಸ್ಸಿನಲ್ಲಿ AI ಸ್ಟಾರ್ಟ್ಅಪ್ ಕಂಪೆನಿ ಕಟ್ಟಿದ ಪ್ರಾಂಜಲಿ ಅವಸ್ಥಿ ಸಾಕ್ಷಿ.
ಪ್ರಾಂಜಲಿ ಅವಸ್ಥಿ ಎಂಬ 16 ವರ್ಷದ ಹುಡುಗಿ AI ಸ್ಟಾರ್ಟ್ಅಪ್ - Delv.AI/ಡೆಲ್ವ್.ಎಐ ಎನ್ನುವ ಕಂಪೆನಿ ಅನ್ನು ಆರಂಭಿಸುವ ಮೂಲಕ ಟೆಕ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾಳೆ.
ಜನವರಿ 2022 ರಲ್ಲಿ ತಮ್ಮ ಕಂಪನಿಯನ್ನು ಸ್ಥಾಪಿಸಿದ್ದು, ಕಂಪನಿ ಆರಂಭವಾಗಿ ಒಂದು ವರ್ಷ ಕಳೆದಿದ್ದು ಲಾಭದಾಯಕವಾಗಿ ಮುಂದುವರಿಯುತ್ತಿದೆ ಎನ್ನಲಾಗಿದೆ.
ಈ ಕುರಿತು ಮಾತನಾಡಿದ ಪ್ರಾಂಜಲಿ ಅವಸ್ಥಿ, ಸುಮಾರು 3.7 ಕೋಟಿ ರೂಪಾಯಿಗಳ ಹಣವನ್ನು ಯಶಸ್ವಿಯಾಗಿ ಕಂಪನಿ ಪಡೆದುಕೊಂಡಿದ್ದು, Delv.AI ನ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ ಚಿಕ್ಕ ಹುಡುಗಿಯ ಸಾರಥ್ಯದ ಕಂಪನಿಯಲ್ಲಿ ಈಗಾಗಲೇ 10 ಉದ್ಯೋಗಿಗಳ ತಂಡ ಇದೆ ಎಂದಿದ್ದಾರೆ.
ಇನ್ನು ತನ್ನ ಉದ್ಯಮಶೀಲತೆಯ ಪ್ರಯಾಣಕ್ಕೆ ತಂದೆಯೇ ಸ್ಫೂರ್ತಿ. ತಂದೆಯನ್ನು ನೋಡಿ ಬೆಳೆದ ಮಗಳು, ಅವರ ಮಾರ್ಗದರ್ಶನದಲ್ಲಿ ಕೇವಲ ಏಳನೇ ವಯಸ್ಸಿನಲ್ಲಿ ಕೋಡಿಂಗ್ ಕಲಿಯಲು ಆರಂಭಿಸಿದ್ದಳು. ಆಕೆಯ ಕುಟುಂಬವು 11ನೇ ವಯಸ್ಸಿನಲ್ಲಿ ಫ್ಲೋರಿಡಾಕ್ಕೆ ಸ್ಥಳಾಂತರಗೊಂಡಿದ್ದು, ಅಲ್ಲಿ ಕಂಪ್ಯೂಟರ್ ಸೈನ್ಸ್ ತರಗತಿಗಳು ಮತ್ತು ಸ್ಪರ್ಧಾತ್ಮಕ ಗಣಿತ ಕಾರ್ಯಕ್ರಮಗಳಿಗೆ ಪ್ರವೇಶವನ್ನು ಪಡೆದು ಫ್ಲೋರಿಡಾ ಇಂಟರ್ನ್ಯಾಶನಲ್ ಯೂನಿವರ್ಸಿಟಿ ರಿಸರ್ಚ್ ಲ್ಯಾಬ್ಗಳಲ್ಲಿ 13ನೇ ವಯಸ್ಸಿನಲ್ಲಿ ಇಂಟರ್ನ್ಶಿಪ್ ತೆಗೆದುಕೊಂಡ ಪ್ರಾಂಜಲಿ ಆಕೆಗೆ ಉದ್ಯಮಶೀಲತೆಯ ಕನಸಿಗೆ ದೊಡ್ಡ ಅವಕಾಶ ನೀಡಿತು.
ಉದ್ಯಮಶೀಲತೆಯ ಪ್ರಯಾಣಕ್ಕೆ ಲಾಭದಾಯಕವಾದ ವ್ಯಾಪಾರ ಕೌಶಲ್ಯಗಳನ್ನು ಪಡೆಯಲು ಭವಿಷ್ಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತೇನೆ ಎಂದು ಪ್ರಾಂಜಲಿ ಹೇಳಿದ್ದಾರೆ.