ಮೈಸೂರು, ಅ 11 (DaijiworldNews/AK): ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಯುತ್ತೇವೆ, ನಮ್ಮ ರೈತರ ರಕ್ಷಣೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರದಲ್ಲಿ ನಮ್ಮ ರಾಜ್ಯದಲ್ಲಿ ಎಷ್ಟು ಟಿಎಂಸಿ ನೀರಿದೆ ಎಂದು ದಾಖಲೆ ತೆಗೆದುಕೊಂಡಿದ್ದಾರೆ. ಅವರ ಡ್ಯಾಂ ನ ಮಾಹಿತಿ ಕೂಡ ತೆಗೆದುಕೊಂಡಿದ್ದಾರೆ. ನಮ್ಮ ಜಲಾಶಯಗಳಿಗೆ 7ರಿಂದ 10ಸಾವಿರ ಕ್ಯೂಸೆಕ್ಸ್ ಒಳ ಹರಿವಿದೆ. ನಮ್ಮ ರೈತರ ರಕ್ಷಣೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.
ಬಿಳಿಗುಂಡಲಿಗೆ ಎರಡು ದಿನ ಕಡಿಮೆ ನೀರು ಹೋಗಿದೆ. ಬೆಂಗಳೂರಿಗೆ ಮಳೆಯಾದ ಕಾರಣ ಅದು ಬ್ಯಾಲೆನ್ಸ್ ಆಗಿದೆ.ಅದನ್ನ ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದೇವೆ ಎಂದರು. ಮೇಕೆದಾಟು ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡಲ್ಲ. ಕೇಂದ್ರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಮೇಕೆ ದಾಟು ವಿಚಾರ ನಮ್ಮ ಮೊದಲ ಆದ್ಯತೆ. ಈ ವಿಚಾರವಾಗಿ ಕೋರ್ಟ್ ಮುಂದೆ ವಾದ ಮಾಡುತ್ತಿದ್ದೇವೆ. ಕೋರ್ಟ್ ಮುಂದೆ ಮತ್ತಷ್ಟು ವಾದ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ನ್ಯಾಯಾಲಯ ಈಗಾಗಲೇ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅವರು ಡ್ಯಾಂ ಕಟ್ಟಿ ನಿಮಗೆ 170 ಟಿಎಂಸಿ ನೀರು ಕೊಡುತ್ತಾರೆ ಎಂದು ಮನದಟ್ಟು ಮಾಡಿದೆ ಎಂದರು.