ನವದೆಹಲಿ, ಅ 11 (DaijiworldNews/HR): ಆಮ್ ಆದ್ಮಿ ಪಕ್ಷವನ್ನು ಕೊನೆಗಾಣಿಸಲು ಪ್ರಯತ್ನಿಸಲಾಗುತ್ತಿದ್ದು, ಅದಕ್ಕಾಗಿ ಆಪ್ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಎಎಪಿ ಶಾಸಕ ಅಮಾನತುಲ್ಲಾ ಖಾನ್ ಸೇರಿದಂತೆ ಇತರ ಕೆಲವು ನಾಯಕರ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ತನಿಖೆ ನಡೆಸಲಾಗುತ್ತಿದ್ದು, ನಮ್ಮ ನಾಯಕರ ವಿರುದ್ಧ ಈವರೆಗೂ 170 ಪ್ರಕರಣಗಳು ದಾಖಲಾಗಿವೆ. ಆದರೆ ಅವುಗಳಲ್ಲಿ 140 ಪ್ರಕರಣಗಳಲ್ಲಿ ತೀರ್ಪುಗಳು ನಮ್ಮ ಪರವಾಗಿವೆ ಎಂದರು.
ಇನ್ನು ಕಳೆದ ಕೆಲವು ತಿಂಗಳುಗಳಲ್ಲಿ ನಮ್ಮ ಹಿರಿಯ ನಾಯಕರು ಹಾಗೂ ಸಚಿವರನ್ನು ಬಂಧಿಸಲು ಆರಂಭಿಸಿದ್ದು, ಈ ದಾಳಿಗಳು ಎಎಪಿಯನ್ನು ಕೊನೆಗೊಳಿಸುವ ಅಭಿಯಾನದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.