ಬೆಂಗಳೂರು, ಅ 11 (DaijiworldNews/MS): ಕಮಿಷನರ್ ಕಚೇರಿ ಹಿಂಭಾಗದ ರಸ್ತೆಯಲ್ಲಿ ಬಸ್ ಶೆಲ್ಟರ್ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಹೈಗ್ರೌಂಡ್ ಪೊಲೀಸರ ತನಿಖೆ ವೇಳೆ ಕಳ್ಳತನದ ಹಿಂದಿನ ಅಸಲಿ ಕಹಾನಿ ಬಯಲಾಗಿದೆ.
ಕಳೆದ ತಿಂಗಳ 30ನೇ ತಾರೀಖು ಕನ್ನಿಂಗ್ ಹ್ಯಾಮ್ ರಸ್ತೆಯ ನಿರ್ಮಾಣ ಹಂತದ ಬಸ್ ಸ್ಟಾಂಡ್ ಕಳ್ಳತನವಾಗಿದೆ ಎಂದು ಸೈನ್ಫೋಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸಹಾಯಕ ಉಪಾಧ್ಯಕ್ಷ ರವಿರೆಡ್ಡಿ ಎಂಬುವವರು ದೂರು ನೀಡಿದ್ದರು.
ಬೆಂಗಳೂರು ಕಮಿಷನರ್ ಕಚೇರಿ ಹಿಂಭಾಗದಲ್ಲೇ ಬಸ್ ನಿಲ್ದಾಣ ಕಳವಾಗಿದೆ ಅಂತ ದೊಡ್ಡ ಸುದ್ದಿ ಆಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟೀಕೆಗೂ ಕಾರಣವಾಗಿತ್ತು. ಈ ಪ್ರಕರಣದ ಅಸಲಿ ಸತ್ಯ ಭೇದಿಸಿದ ಪೊಲೀಸರು, ಕಳವು ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ.
ಪ್ರಕರಣದ ತನಿಖೆ ಕೈಗೊಂಡ ಹೈಗೌಂಡ್ಸ್ ಪೊಲೀಸರು, ಖಾಸಗಿ ಕಂಪನಿಯಿಂದ ಬಸ್ ನಿಲ್ದಾಣ ಮಾಡಲು ಮುಂದಾಗಿತ್ತು. ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಕೂಡ ಪಡೆದಿದ್ದ ರವಿರೆಡ್ಡಿ ಅವರು ಆಗಸ್ಟ್ 21ರಂದು ಬಸ್ ಸ್ಟ್ಯಾಂಡ್ ಕೆಲಸವನ್ನು ಶುರು ಮಾಡಿಸಿದ್ದರು. ಆದರೆ, ಕಳಪೆ ಕಾಮಗಾರಿಯಿಂದ ಕೂಡಿದೆ ಎಂಬ ಮಾಹಿತಿ ಹಿನ್ನೆಲೆ ಶಿವಾಜಿನಗರದದ ಬಿಬಿಎಂಪಿಯ ಕಾರ್ಯಪಾಲಕ ಅಭಿಯಂತರಿಗೆ (ಎಇಇ) ಸ್ಥಳ ಪರಿಶೀಲಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಅನಂತರ ಬಸ್ ಸ್ಟ್ಯಾಂಗ್ ಶೆಲ್ಟರ್ ಅನ್ನು ಬಿಬಿಎಂಪಿಯಿಂದ ಸೀಜ್ ಮಾಡಲಾಗಿತ್ತು. ನಂತರ ಅದನ್ನು ಗೋಡ್ನಲ್ಲಿ ಸಂಗ್ರಹ ಮಾಡಿ ಇಡಲಾಗಿತ್ತು. ಇದನ್ನು ಅರಿಯದೆ, ಮೆಟಿರೀಯಲ್ ಕಾಣೆಯಾಗಿರೋದನ್ನು ಗಮನಿಸಿದ ರವಿರೆಡ್ಡಿ ಸೆಪ್ಟೆಂಬರ್ 30 ರಂದು ಮತ್ತೆ ಹೈಗ್ರಾಂಡ್ಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ದೂರು ಪಡೆದು ತನಿಖೆ ಮಾಡಿದಾಗ ಅಸಲಿ ಸತ್ಯ ಬಯಲಾಗಿದ್ದು, ಸದ್ಯ ರವಿ ರೆಡ್ಡಿ ವಿರುದ್ಧವೇ ದೂರು ನೀಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.