ಬೆಂಗಳೂರ, ಅ 09 (DaijiworldNews/AK):2024ರಲ್ಲಿ ಮತ್ತೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ಡಿಕೆ ಶಿವಕುಮಾರ್ ಮತ್ತೆ ತಿಹಾರ್ ಜೈಲಿಗೆ ಹೋಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಜಿಲ್ಲಾ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಈ ಸರ್ಕಾರದ ಪಾಪದ ಕೊಡ ತುಂಬುತ್ತಿದೆ. ಇಷ್ಟು ಕೆಟ್ಟ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ಆಂತರಿಕ ಕಚ್ಚಾಟದಿಂದ ಈ ಸರ್ಕಾರ ಹೋಗುತ್ತದೆ. 2024ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದು ಖಚಿತ. ಆ ಚುನಾವಣೆಗೆ ಡಿಕೆ ಶಿವಕುಮಾರ್ ಅಭ್ಯರ್ಥಿ ಆಗುವುದೇ ಅನುಮಾನ. ಅವರು ತಿಹಾರ್ ಗೆ ಓಡುವ ಕಾಲ ಹತ್ತಿರದಲ್ಲಿ ಇದೆ ಎಂದು ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜೋಡೆತ್ತು ಎಂದವರು ನಡುರಸ್ತೆಯಲ್ಲಿ ಕೈ ಬಿಟ್ಟರು. ಮೈತ್ರಿ ಸರ್ಕಾರ ಹೋಗಿದ್ದು ಡಿಕೆ ಶಿವಕುಮಾನಿಂದಲೇ. ಸರ್ಕಾರದ ಪತನ ಗ್ಯಾರಂಟಿ, ಅವರು ತಿಹಾರ್ ಗೆ ಓಡುವುದು ಖಚಿತ. ನಮ್ಮನ್ನು ಹಾಸನಕ್ಕೆ ಓಡಿಸಬಹುದು, ಅವರು ತಿಹಾರ್ ಗೆ ಓಡುವ ಕಾಲ ಹತ್ತಿರದಲ್ಲಿ ಇದೆ. ಒಮ್ಮೆ ತಿಹಾರ್ ನೋಡಿಕೊಂಡು ಬಂದಿದ್ದಾರೆ. ಅವರು ಮತ್ತೆ ಅಲ್ಲಿಗೆ ಪರಮನೆಂಟಾಗಿ ಹೋದರೂ ಅಚ್ಚರಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.