ಹಾವೇರಿ, ಅ 07 (DaijiworldNews/AK): ಜಾತಿ ಗಣತಿ ವರದಿ ಬಗ್ಗೆ ನಮ್ಮಲ್ಲಿ ಚರ್ಚೆಯೇ ಆಗಿಲ್ಲ. ಜಾತಿ ಗಣತಿಯೋ? ಶೈಕ್ಷಣಿಕ ಗಣತಿಯೋ? ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ, ಜಾತಿ ಗಣತಿ ಅಲ್ಲ ಎಂದು ಹೇಳಿದ್ದಾರೆ. ಸದ್ಯ ಜಾತಿ ಗಣತಿ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಒತ್ತಾಯಿಸಲಾಗಿದೆ.
ಬಾರ್ ಲೈಸೆನ್ಸ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ದ್ವಂದ್ವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಇದ್ದಾರೋ, ಸೂಪರ್ ಸಿಎಂ ಇದ್ದಾರೋ ಎಂದು ತಿಳಿಯುತ್ತಿಲ್ಲ. ಒಂದು ನೀತಿ ಬಗ್ಗೆ ಮಾತನಾಡಿದಾಗ ಸರ್ಕಾರ ಅದಕ್ಕೆ ಸ್ಪಷ್ಟನೆ ಕೊಡಲಿ. ಎಲ್ಲಾ ವಿಚಾರದಲ್ಲಿಯೂ ಸಿಎಂ ಒಂದು ದಾರಿ, ಡಿಸಿಎಂ ಒಂದು ದಾರಿ ಆಗಿದೆ. ಕಾವೇರಿ ನೀರು ಬಿಡುವ ವಿಚಾರದಲ್ಲಿ ಡಿಸಿಎಂ ನೀರು ಬಿಡಲ್ಲ ಎಂದರು.ಆದರೆ ಸಿಎಂ ನೀರು ಬಿಟ್ಟಿದ್ದನ್ನು ನಾವು ನೋಡಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.