ದಾವಣಗೆರೆ: ಅ 06 (DaijiworldNews/AK): ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯವು ಬಿಡುಗಡೆ ಮಾಡಿರುವ ವಿಶ್ವದ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಫ್ರೋ ಬಿ.ಸಿ.ಪ್ರಸನ್ನಕುಮಾರ ಸ್ಥಾನ ಪಡೆದಿದ್ದು, ಇವರ ಜತೆಗೆ ಅವರ ಮಾರ್ಗದರ್ಶನದಲ್ಲಿನ ನಾಲ್ಕು ಸಂಶೋಧನಾರ್ಥಿಗಳಾದ ಡಾ. ಆರ್.ಜೆ.ಪುನೀತ್ ಗೌಡ, ಡಾ.ಆರ್.ನವೀನ್ ಕುಮಾರ್, ಡಾ. ಜೆ.ಕೆ.ಮಧುಕೇಶ್ ಮತ್ತು ಡಾ. ಆರ್.ಎಸ್. ವರುಣ್ ಕುಮಾರ್ ಕೂಡ ಸೇರ್ಪಡೆಯಾಗಿದ್ದಾರೆ.
ಸ್ಟ್ಯಾನ್ ಫೋರ್ಡ್ ವಿವಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಎಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಪಟ್ಟಿಯನ್ನು ಸಿದ್ಧಪಡಿಸಿದೆ.
ಈ ಮಾನದಂಡಗಳ ಪ್ರಕಾರ ವಿಜ್ಞಾನಿಗಳನ್ನು 22 ವೈಜ್ಞಾನಿಕ ಕ್ಷೇತ್ರಗಳು ಮತ್ತು 174 ಉಪ-ಕ್ಷೇತ್ರಗಳಾಗಿ ವರ್ಗೀಕರಿಸಲಾಗಿದೆ.
ಇದರಲ್ಲಿ ದಾವಣಗೆರೆ ವಿವಿಯ ಗಣಿತಶಾಸ್ತ್ರ ವಿಭಾಗದ ಫ್ರೋ.ಬಿ.ಸಿ. ಪ್ರಸನ್ನಕುಮಾರ್ ಈ ವರ್ಷದ ಶ್ರೇಯಾಂಕ ಪಡೆದಿದ್ದು, ಸತತ ಮೂರನೇ ಬಾರಿಗೆ ಈ ಸ್ಥಾನ ಪಡೆದಿದ್ದಾರೆ.
ಜತೆಗೆ ಇವರ ಮಾರ್ಗದರ್ಶದಲ್ಲಿ ಸಂಶೋಧನೆ ನಡೆಸುತ್ತಿರುವ ನಾಲ್ವರು ವಿದ್ಯಾರ್ಥಿಗಳು ಕೂಡ ಗಣಿತಶಾಸ್ತ್ರದ ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ ವಿಷಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿದ್ದು, ಮಾರ್ಗದರ್ಶಕರೊಡನೆಯೇ ವಿಜ್ಞಾನಿಗಳ ಪಟ್ಟಿಗೆ ಸೇರಿರುವುದು ಸ್ಪೂರ್ತಿದಾಯಕವಾಗಿದೆ. ನಾಲ್ವರು ವಿಜ್ಞಾನಿಗಳು ಪ್ರಸುತ್ತ ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.