ಮೈಸೂರು,ಅ 06 (DaijiworldNews/AK): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸುಮಾರು 300 ಕೋಟಿ ರೂ. ನಿಧಿಯನ್ನು ದುರ್ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ಅಪರಿಚಿತ ಅಧಿಕಾರಿಗಳ ವಿರುದ್ಧಎಫ್ಐಆರ್ ದಾಖಲಿಸಿದೆ.
ಕೆಎಸ್ಒಯು ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಯೋಜನೆಯಡಿ 2009-10 ರಿಂದ 2012-13 ರ ನಡುವೆ 250 ಕೋಟಿ ರೂ., 2013-14 ರಲ್ಲಿ 50 ಕೋಟಿ ರೂ. ಅಕ್ರಮ ಎಸಗಿರುವುದು ಲೆಕ್ಕ ಪರಿಶೋಧನೆ ವೇಳೆ ಬೆಳಕಿಗೆ ಬಂದಿತ್ತು
ಸಹಭಾಗಿತ್ವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ದಾಖಲಾತಿ, ಪರೀಕ್ಷೆ, ಅಧ್ಯಯನ ಕೇಂದ್ರ ಸ್ಥಾಪನೆ ಹಾಗೂ ಇತರ ಶುಲ್ಕವಾಗಿ ಹಣವನ್ನು ಸಂಗ್ರಹಿಸಿವೆ. ಈ ಮೊತ್ತವನ್ನು ಸಂಸ್ಥೆಗಳು ವಿವಿಗೆ ಜಮೆ ಮಾಡಬೇಕಿತ್ತು. ಆದರೆ ಕೆಲವು ಸಂಸ್ಥೆಗಳು ಜಮೆ ಮಾಡುವ ಹಣದಲ್ಲಿ ವ್ಯತ್ಯಾಸ ಮಾಡಿದ್ದ ವಿಚಾರ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
2022ರ ಫೆಬ್ರವರಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವರ ಪತ್ರ ಹಾಗೂ ವಿವಿಯ ಆಡಳಿತ ಮಂಡಳಿಯ ಸಭೆಯ ನಿರ್ಣಯ ಆಧರಿಸಿ ರಾಜ್ಯಪಾಲರು ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಈ ಪತ್ರದ ಆಧಾರದ ಮೇಲೆ ರಾಜ್ಯ ಸರ್ಕಾರವು ಈ ವರ್ಷ ಮಾರ್ಚ್ 13ರಂದು ಸಿಬಿಐ ತನಿಖೆಗೆ ಆದೇಶಿಸಿತ್ತು. ಅಷ್ಟೇ ಅಲ್ಲದೇ ಸಂಬಂಧಿಸಿದ ಅಧಿಕಾರಿಗಳು, ಲೆಕ್ಕಪರಿಶೋಧಕರು, ಬ್ಯಾಂಕುಗಳು ಸಿಬಿಐಗೆ ಅಗತ್ಯ ಮಾಹಿತಿ ಒದಗಿಸುವಂತೆ ಸೂಚಿಸಿತ್ತು. 2009 ರಿಂದ 2016ರ ನಡುವಿನ ವ್ಯವಹಾರ ತನಿಖೆ ನಡೆಸುವಂತೆ ಕೋರಿ ಸಿಬಿಐಗೆ ರಾಜ್ಯ ಸರ್ಕಾರ ಪತ್ರ ಬರೆದಿದೆ.