ಬೆಳಗಾವಿ, ಎ13(SS): ಒಂದು ವೇಳೆ 'ನಿಖಿಲ್ ಎಲ್ಲಿದ್ದೀಯಪ್ಪಾ...' ಎಂಬ ಹೆಸರಿನಲ್ಲಿ ಚಲನಚಿತ್ರ ನಿರ್ಮಾಣವಾದರೆ ಅದರಲ್ಲಿ ನಟಿಸಲು ನಾನು ಸಿದ್ಧವಿರುವುದಾಗಿ ಬಿಜೆಪಿಯ ಮಾಜಿ ಎಂಎಲ್ಸಿ, ಸ್ಟಾರ್ ಪ್ರಚಾರಕಿ ನಟಿ ತಾರಾ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ನಿಖಿಲ್ ಎಲ್ಲಿದ್ದೀಯಪ್ಪಾ...' ಎಂಬ ಹೆಸರಿನಲ್ಲಿ ಸಿನಿಮಾ ಮಾಡಬಾರದು ಅಂತೇನಿಲ್ಲ. ಒಳ್ಳೆ ಸಿನಿಮಾ ಆಗಿರಬೇಕು. ನಿಖಿಲ್ ಎಲ್ಲಿದೀಯಪ್ಪ ಎಂಬ ಟೈಟಲ್ ಇದ್ರೂ ತೊಂದರೆ ಇಲ್ಲ. ಅಷ್ಟೇಕೆ, ಚಿತ್ರಕ್ಕೆ ನಿಖಿಲ್ ನಾಯಕ ನಟನಾದರೂ ನಾನು ಅಭಿನಯಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಒಂದು ವೇಳೆ ಪಾತ್ರ ಚೆನ್ನಾಗಿದೆ ಅನ್ನಿಸಿದರೆ, ಕಥಾಹಂದರ ಇಷ್ಟವಾದರೆ, ಒಳ್ಳೆಯ ಸಂಭಾವನೆ ಸಿಕ್ಕರೆ ಖಂಡಿತವಾಗಿಯೂ ಒಪ್ಪಿಕೊಳ್ಳುತ್ತೇನೆ ಎಂದು ನಗುನಗುತ್ತಲೇ ಉತ್ತರಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮೈಕ್ ಹಿಡಿದ ಕುಮಾರಸ್ವಾಮಿಗೆ ಅಲ್ಲಿದ್ದವರೊಬ್ಬರು ಸರ್ ನಿಖಿಲ್ ಅಂತ ಕೂಗಿ ಎನ್ನುತ್ತಾರೆ. ಆಗ ಕುಮಾರಸ್ವಾಮಿ, ‘ನಿಖಿಲ್ ಎಲ್ಲಿದ್ದೀಯಪ್ಪಾ... ನಿಖಿಲ್, ಓ ನಿಖಿಲ್ ಎಲ್ಲಿದ್ದೀ’ ಎಂದು ಕೇಳುತ್ತಾರೆ. ಈ ಮಧ್ಯೆ ನಿಖಿಲ್ ಕೈ ತೋರಿಸುವ ವಿಡಿಯೊ ಕಾಣುತ್ತದೆ. ಆ ವೇಳೆ, ಕುಮಾರಸ್ವಾಮಿ ‘ಓ ಈಗಾಗಲೇ ನೀನು ಜನಗಳ ಮಧ್ಯೆ ಸೇರಿಬಿಟ್ಟಿದ್ದೀಯಾ. ಜನಗಳ ಆಶೀರ್ವಾದ ಪಡೆಯಲು ಜನಗಳ ಜತೆ ಸೇರಿದ್ದೀಯ ಹಾಗಿದ್ರೆ’ ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ನಿಖಿಲ್, ‘ನಿಮ್ಮನ್ನು ನಮ್ಮ ತಾತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತ್ಸೋ ಈ ಜನಗಳ ಮಧ್ಯೆ ಇದ್ದೀನಿ ಅಪ್ಪಾ’ ಎನ್ನುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.