ಮಧ್ಯಪ್ರದೇಶ, ಅ 03 (DaijiworldNews/HR): 22ನೇ ವಯಸ್ಸಿನಲ್ಲೇ ಮೊದಲ ಪ್ರಯತ್ನದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಕಂಡ ಸ್ವಾತಿ ಮೀನಾ ನಾಯ್ಕ್ ಅವರ ಯಶೋಗಾಥೆ ಇದಾಗಿದೆ.
ಸಣ್ಣ ವಯಸ್ಸಿನಲ್ಲೇ UPSC ಪಾಸ್ ಆದ ಸ್ವಾತಿ ಮೀನಾ ನಾಯ್ಕ್ ಅವರಿಗೆ ಕೇಂದ್ರ ಸರಕಾರವು ಇತ್ತೀಚೆಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದಡಿ ಬರುವ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕಿಯಾಗಿ ಐದು ವರ್ಷದ ಅವಧಿಗೆ ನೇಮಕ ಮಾಡಿದೆ.
ಸ್ವಾತಿ ಮೀನಾ ನಾಯ್ಕ್ ಅವರು 2007ರ ಬ್ಯಾಚ್ನ ಐಎಎಸ್ ಅಧಿಕಾರಿ. ಮಧ್ಯ ಪ್ರದೇಶ ಕೇಡರ್ನ ಸ್ವಾತಿ ಮೀನಾ ನಾಯ್ಕ್ ತನ್ನ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್ಸಿ ಪರೀಕ್ಷೆ ಉತ್ತೀರ್ಣಗೊಂಡಿದ್ದಾರೆ.
ಇನ್ನು ಈವರೆಗೆ ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾತಿ ಅವರು ಇನ್ಮುಂದೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸ್ವಾತಿ ಅವರು 2007ರಲ್ಲಿ ನಾಗರಿಕ ಸೇವಾ ಪರೀಕ್ಷೆಯನ್ನು ತನ್ನ 22ನೇ ವಯಸ್ಸಿನಲ್ಲಿ ಉತ್ತೀರ್ಣರಾಗಿ ಮೊದಲ ಪ್ರಯತ್ನದಲ್ಲಿಯೇ 260ನೇ ರಾಂಕ್ ಪಡೆದಿದ್ದರು. ಆಕೆಯ ಬ್ಯಾಚ್ನಲ್ಲಿ ಅತ್ಯಂತ ಕಿರಿಯ ಅಧಿಕಾರಿ ಎಂಬ ಹೆಗ್ಗಳಿಕೆ ಕೂಡ ಪಾತ್ರರಾಗಿದ್ದಾರೆ.
ಸ್ವಾತಿ ಮೀನಾ ನಾಯ್ಕ್ ಅವರ ತಂದೆಯೂ ಸರಕಾರಿ ಉದ್ಯೋಗಿಯಾಗಿದ್ದು ರಾಜಸ್ಥಾನ ಆಡಳಿತ ಸೇವಾ ವಿಭಾಗದ ಅಧಿಕಾರಿಯಾಗಿದ್ದಾರೆ. ಇವರ ತಾಯಿ ಡಾ. ಸರೋಜಾ ಮೀನಾ ಅವರು ಪೆಟ್ರೋಲ್ ಪಂಪ್ ಮಾಲಕಿ. ಸ್ವಾತಿ ಅವರು ತನ್ನ ಶಿಕ್ಷಣವನ್ನು ಅಜ್ಮೀರ್ನಲ್ಲಿ ಪಡೆದಿದ್ದಾರೆ. ಈಕೆಯ ಸಹೋದರಿ ಐಎಫ್ಎಸ್ ಅಧಿಕಾರಿಯಾಗಿದ್ದಾರೆ.