ತುಮಕೂರು,30 (DaijiworldNews/AK): ಮನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿ 6 ಮಂದಿಗೆ ಗಾಯವಾಗಿರುವ ಘಟನೆಯೊಂದು ಶಿರಾದ ಮಧುಗಿರಿ ರಸ್ತೆಯ ಪಾರ್ಕ್ ಮೊಹಲ್ಲಾದಲ್ಲಿ ಶುಕ್ರವಾರ ನಡೆದಿದೆ.
ಅಡುಗೆ ಅನಿಲ ಸಿಲಿಂಡರ್ನಿಂದ ಹೆಚ್ಚಿನ ಪ್ರಮಾಣದಲ್ಲಿ ಅನಿಲ ಸೋರಿಕೆಯಿಂದ ದುರ್ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಬಾಂಬ್ ನಿಷ್ಕ್ರಿಯ ತಂಡದವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ನದೀಮ್, ಗುಲಾಬ್ ಜಾನ್, ನಿಜಾಮ್, ಸಾಧಿಕಾ ಮತ್ತು ಮಕ್ಕಳಾದ ಜೆಬಿ, ಆಬಿದಾ ಅವರಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಅಗ್ನಿ ಅವಘಡದ ವೇಳೆ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳಕ್ಕೆ ಶಿರಾ ಶಾಸಕ ಟಿಬಿ.ಜಯಚಂದ್ರ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.
ಮನೆಯಲ್ಲಿ ಸಿಲಿಂಡರ್ ಅನಿಲ ಸೋರಿಕೆಯಾಗಿದ್ದು, ಇದನ್ನು ತಿಳಿಯದೆ ಸ್ಟೌವ್ ಹಚ್ಚಲು ಹೋದಾಗ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.