ಬೆಂಗಳೂರು, ಸೆ 26 (DaijiworldNews/MS): ಹೊಸ ಸರ್ಕಾರ ಬಂದು ನಾಲ್ಕೈದು ತಿಂಗಳು ಕಳೆಯಿತು. ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣೆಗೆ ಚಾಲನೆಯನ್ನೂ ಕೊಟ್ಟಿದ್ದಾರೆ. ಆದರೆ, ಬಿಜೆಪಿ ವಿಪಕ್ಷ ನಾಯಕನನ್ನೇ ಆಯ್ಕೆ ಮಾಡಿಲ್ಲ. ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವ ಗೋಜಿಗೂ ಹೋಗಿಲ್ಲ. ಇದೀಗ ರಾಜ್ಯಾಧ್ಯಕ್ಷ ಆಯ್ಕೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ರಾಜ್ಯದಲ್ಲಿ ಬಿಜೆಪಿ ಘಟಕಕ್ಕೆ ಈ ವಾರದಲ್ಲಿಯೇ ಹೊಸ ಅಧ್ಯಕ್ಷರ ನೇಮಕ ಆಗುವ ಸಾಧ್ಯತೆಗಳು ಇವೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪುದುಚೇರಿ, ನಾಗಾಲ್ಯಾಂಡ್, ಮೇಘಾಲಯ ರಾಜ್ಯ ಘಟಕಗಳಿಗೆ ಅಧ್ಯಕ್ಷರ ನೇಮಕವನ್ನು ಬಿಜೆಪಿ ವರಿಷ್ಠರು ಈಗಾಗಲೇ ಮಾಡಿದ್ದಾರೆ.
ಹೀಗಾಗಿ ರಾಜ್ಯ ಘಟಕಕ್ಕೆ ಹೊಸ ನಾಯಕನನ್ನು ನೇಮಕ ಮಾಡುವ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಬಿ.ವೈ. ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಎಂಬ ಮಾತು ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪಕ್ಷ ಚಟುವಟಿಕೆಯಲ್ಲಿ ಯಡಿಯೂರಪ್ಪ ಮತ್ತೆ ಸಕ್ರಿಯರಾಗಿದ್ದಾರೆ.
ಬಿಜೆಪಿಯಲ್ಲಿ ಪದ್ದತಿಯಂತೆ ಮೂರು ವರ್ಷಗಳ ಕಾಲ ರಾಜ್ಯಾಧ್ಯಕ್ಷರ ಅಧಿಕಾರದ ಅವಧಿ. ಆಗಸ್ಟ್ ತಿಂಗಳಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಅವಧಿಯೂ ಮುಕ್ತಾಯವಾಗಿದೆ.