ಬೆಂಗಳೂರು, ಸೆ 23 (DaijiworldNews/MR) : ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯೊಬ್ಬರಿಂದ ಕೋಟ್ಯಾಂತರ ರೂ. ವಂಚನೆ ನಡೆಸಿರುವ ಪ್ರಕರಣದಲ್ಲಿ ಚೈತ್ರಾ ಹೆಸರಿನ ಜೊತೆಗೆ ‘ಕುಂದಾಪುರ’ ಹೆಸರನ್ನು ಬಳಸದಂತೆ ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ.
ಸಾಮಾಜಿಕ ಜಾಲತಾಣ ಹಾಗೂ ಮಾದ್ಯಮಗಳಲ್ಲಿ ಕುಂದಾಪುರ ಹೆಸರು ತೆಗೆದುಹಾಕುವಂತೆ ಕೋರಿ ನಗರದ ಸಿಟಿ ಸಿವಿಲ್ ಕೋರ್ಟ್ಗೆ ಕುಂದಾಪುರ ಮೂಲದ ಉದ್ಯಮಿ, ಪ್ರಸ್ತುತ ಬೆಂಗಳೂರು ಹನುಮಂತ ನಗರದ ನಿವಾಸಿ ಗಣೇಶ್ ಅರ್ಜಿ ಸಲ್ಲಿಸಿದ್ದಾರೆ.
ಚೈತ್ರಾ ಕುಂದಾಪುರ ಅವರ ಸುದ್ದಿಯನ್ನು ಪ್ರಸಾರ ಮಾಡುವಾಗ ಚೈತ್ರ ಹೆಸರಿನ ಜೊತೆಗೆ ಕುಂದಾಪುರ ಹೆಸರನ್ನು ಬಳಸುವುದರಿಂದ ಕುಂದಾಪುರ ಊರಿನ ಹೆಸರಿಗೆ ಘಾಸಿಯಾಗುತ್ತದೆ. ಈ ಒಂದು ಘಟನೆಯಿಂದ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು. ಕುಂದಾಪುರ ದೇವಾಲಯಗಳಿರುವ ಮತ್ತು ಪ್ರಕೃತಿ ಸೊಬಗಿನ ಊರು. ಈ ಊರಿನ ಹೆಸರು ಆರೋಪಿಯೊಬ್ಬರ ಹೆಸರಿನ ಕೊನೆಯ ಭಾಗವಾಗಿರುವ ಕಾರಣಕ್ಕೆ ಹಾಳಾಗಬಾರದು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಮತ್ತು ತಂಡದ ವಿಚಾರಣೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು ಈ ನಡುವೆ ಚೈತ್ರಾ ಪ್ರಕರಣದಲ್ಲಿ ಕುಂದಾಪುರ ಹೆಸರನ್ನು ಪದೇ ಪದೇ ಬಳಸುತ್ತಿರುವುದರಿಂದ ಇಲ್ಲಿನ ಸ್ಥಳೀಯರ ಭಾವನೆಗೆ ದಕ್ಕೆಯಾಗುತ್ತಿರುವುದರಿಂದ ಮಾದ್ಯಮಗಳಿಗೆ ಕುಂದಾಪುರ ಹೆಸರನ್ನು ಬಳಸದಂತೆ ನಿರ್ಬಂಧ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.