ನವದೆಹಲಿ, ಸೆ 22 (DaijiworldNews/Ak):ಮಂಗಳೂರಿನಿಂದ ಗೋವಾಗೆ ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ನೀಡುವಂತೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಸಚಿವರು, ಅಕ್ಟೋಬರ್ ಅಂತ್ಯದೊಳಗೆ ಮಂಗಳೂರಿನಿಂದ ಗೋವಾಗೆ ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ.
ಬೆಂಗಳೂರು ಕಣ್ಣೂರು ರೈಲನ್ನು ಕೊಚ್ಚಿನ್ ವರೆಗೆ ವಿಸ್ತರಿಸುವಂತೆ ಇರುವ ಕೇರಳಿಗರ ಮನವಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸದಂತೆ ಮಾನ್ಯ ಸಚಿವರನ್ನು ಒತ್ತಾಯಿಸಿದ್ದು, ಇದಕ್ಕೆ ಸ್ಪಂದಿಸಿರುವ ಸಚಿವರು ಅಂತಹ ಯಾವುದೇ ಪ್ರಸ್ತಾವನೆಗೆ ಒಪ್ಪಿಗೆ ನೀಡುವುದಿಲ್ಲವೆಂದು ತಿಳಿಸಿದ್ದಾರೆ.
ಪ್ರತಿ ದಿನ ಮುಂಜಾನೆ ಸುಬ್ರಹ್ಮಣ್ಯ ರಸ್ತೆಯಿಂದ ಹೊರಟು ಮಂಗಳೂರಿಗೆ ಹಾಗೂ ಸಂಜೆ ಮಂಗಳೂರಿನಿಂದ ಸುಬ್ರಹ್ಮಣ ರಸ್ತೆಗೆ ಪ್ಯಾಸೆಂಜರ್ ರೈಲು ಒದಗಿಸಲು ಒಪ್ಪಿಗೆ.
ನೀಡಿದ್ದಾರೆ.
ರೈಲ್ವೆ ಇಲಾಖೆಯನ್ನು ಕೇರಳ ಹಿಡಿತದಿಂದ ತಪ್ಪಿಸಲು ದಕ್ಷಿಣ ರೈಲ್ವೆಯ ಪಾಲಕ್ಕಾಡು ವಿಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಭಾಗವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸಬೇಕೆಂಬ ಮನವಿಗೆ ಸಚಿವರು ಈಗಾಗಲೇ ಈ ಕುರಿತು ಅಗತ್ಯವಾದ ಸೂಚನೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ರೈಲ್ವೆ ಹಾಗೂ ಕೊಂಕಣ ರೈಲ್ವೆಗಳ ವಿಭಾಗಳ ನಡುವೆ ಸಂಚರಿಸುವ ರೈಲುಗಳ ಅನಗತ್ಯ ವಿಳಂಬವನ್ನು ನಿವಾರಣೆಯ ಬಗ್ಗೆ ಸಂಸದರು, ಸಚಿವರ ಗಮನ ಸೆಳೆದಾಗ ಈ ಕುರಿತು ಅನಗತ್ಯ ವಿಳಂಬವನ್ನು ನಿವಾರಣೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ರೈಲ್ವೆ ಸಚಿವರು ಸೂಚಿಸಲಾಗಿದೆ ಎಂದು ರೈಲ್ವೆ ಸಚಿವರು ಹೇಳಿದರು ಎಂದರು.