ಬೆಂಗಳೂರು,ಸೆ 22 (DaijiworldNews/AK): ಸಮಕಾಲೀನ ಮಾರುಕಟ್ಟೆಗೆ ತಕ್ಕಂತೆ ಇಲ್ಲದಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತಕ್ಕೆ ಸಂಪೂರ್ಣ ಹೊಸ ರೂಪ ಕೊಟ್ಟು, ಕಾರ್ಪೊರೇಟ್ ಶೈಲಿಯಲ್ಲಿ ಚಟುವಟಿಕೆಗಳು ಇರುವ ಹಾಗೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಕಾರ್ಖಾನೆಯ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಕೆಎಸ್ಡಿಎಲ್ ಅನ್ನು ಕೇವಲ ಸರ್ಕಾರಿ ಉದ್ದಿಮೆಯಾಗಿ ನೋಡುವ ದೃಷ್ಟಿಕೋನಕ್ಕೆ ವಿದಾಯ ಹೇಳಲಾಗುವುದು.
ಈ ಸಂಸ್ಥೆ ತಯಾರಿಸುವ ಮೈ ಸೋಪು, ಊದುಕಡ್ಡಿ ಸೇರಿದಂತೆ ಪ್ರತಿಯೊಂದು ಉತ್ಪನ್ನವೂ ಸಾಮಾನ್ಯ ಕಿರಾಣಿ ಅಂಗಡಿಯಿಂದ ಹಿಡಿದ ಸೂಪರ್ ಸ್ಪೆಷಾಲಿಟಿ ಮಾಲ್ವರೆಗೆ ಎಲ್ಲೆಡೆಯೂ ಸಿಗುವಂತೆ ಮಾಡಲಾಗುವುದು.
ಒಟ್ಟಿನಲ್ಲಿ ಇಡೀ ಭಾರತದಾದ್ಯಂತ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು ಎನ್ನುವುದು ಈಗಿನ ಗುರಿಯಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.