ಚಿಕ್ಕಮಗಳೂರು, ಎ12(SS): ಚುನಾವಣೆಯಲ್ಲಿ ನಾನು ಗೆದ್ದರೆ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತೇನೆ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಆರಂಭಿಸಿರುವ ಗೋ ಬ್ಯಾಕ್ ಶೋಭಾ ಅಭಿಯಾನವನ್ನು ಚುನಾವಣೆಯಲ್ಲಿ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಯಶಸ್ವಿಯಾಗಿ ಮುಗಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ನಾನು ಗೆದ್ದರೆ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಲಾಗುವುದು. ಜನರ ವಿರೋಧಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಳೆದ ಲೋಕ ಸಭಾ ಚುನಾವಣೆಯಲ್ಲಿ 1.80 ಲಕ್ಷ ಮತಗಳಿಂದ ಗೆದ್ದ ಸಂಸದೆ ಶೋಭಾ ಕರದ್ಲಾಂಜೆ ಅವರು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಕ್ಷೇತ್ರದ ಸಮಸ್ಯೆ ಆಲಿಸಲು ಮನೆಯನ್ನು ಮಾಡಲಿಲ್ಲ. ಕಸ್ತೂರಿರಂಗನ್ ವರದಿ ಜಾರಿ ಸಭೆಯಲ್ಲಿ ಭಾಗವಹಿಸಲಿಲ್ಲ. ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ತೀರ್ಮಾನವಾದಾಗಲೂ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ ಎಂದು ಟೀಕಿಸಿದರು.
ಪ್ರಸ್ತುತ ಚುನಾವಣೆಯಲ್ಲಿ ಮತದಾರರು ಕೆಲಸ ಮಾಡದ ಶೋಭಾ ಕರಂದ್ಲಾಜೆ ಬೇಕೋ ಅಥವಾ ಕೆಲಸ ಮಾಡುವ ಪ್ರಮೋದ್ ಮಧ್ವರಾಜ್ ಬೇಕೋ ಎಂಬುದನ್ನು ನೀವೇ ನಿರ್ಧರಿಸಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ 25 ಕೋಟಿ ಜನ ಬಡವರಿದ್ದು, ಅವರನ್ನು ಬಡತನ ರೇಖೆಯಿಂದ ಮೇಲೆತ್ತಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂತಹ ಕುಟುಂಬದ ಪ್ರತಿ ಮಹಿಳೆಗೆ 6 ಸಾವಿರ ರೂ.ನಂತೆ ವಾರ್ಷಿಕ 72 ಸಾವಿರ ರೂ. ಆದಾಯ ನೀಡುವ ಮಹಾ ಕ್ರಾಂತಿಕಾರಿಕ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.