ಬೆಂಗಳೂರು, ಸೆ 20 (DaijiworldNews/MS): ಚೈತ್ರಾ ಕುಂದಾಪುರ ಮತ್ತು ಅವರ ಗ್ಯಾಂಗ್ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ತೆಗೆಸಿಕೊಡುವುದಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿ ಹೊಸಪೇಟೆ ಸಂಸ್ಥಾನ ಮಠದ ಸ್ವಾಮೀಜಿ ಅಭಿನವ ಹಾಲಶ್ರೀ ಅವರನ್ನು ಬೆಂಗಳೂರಿನ ಸ್ಥಳೀಯ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಸಿಸಿಬಿ ಪೊಲೀಸರಿಗೆ ಒಪ್ಪಿಸಿದೆ.
ಸೆಪ್ಟೆಂಬರ್ 29ರವರೆಗೆ ಹಾಲಶ್ರೀಯನ್ನು ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ, ಮಹಜರು ಪ್ರಕ್ರಿಯೆ ನಡೆಸಬೇಕರುವುದರಿಂದ ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಸಿಸಿಬಿ, ನ್ಯಾಯಾಧೀಶರ ಮುಂದೆ ಮನವಿ ಮಾಡಿದೆ. ಸಿಸಿಬಿಯ ಈ ಮನವಿ ಪುರಸ್ಕರಿಸಿದ ಕೋರ್ಟ್, ಆರೋಪಿಯನ್ನು ಸೆಪ್ಟೆಂಬರ್ 29ರ ವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಇನ್ನು ಹಾಲಶ್ರೀ ಜಾಮೀನು ಅರ್ಜಿ ವಿಚಾರಣೆಯನ್ನು ಕಾಯ್ದಿರಿಸಿದೆ.
ಇತ್ತೀಚೆಗೆ ಪ್ರಕರಣ ಹೊರಬಂದಾಗಿನಿಂದ ತಲೆಮರೆಸಿಕೊಂಡಿದ್ದ ಸ್ವಾಮೀಜಿ, ತಮ್ಮ ಮಠದಿಂದ ತಲೆಮರೆಸಿಕೊಂಡಿದ್ದರು. ವೇಷ ಬದಲಿಸಿಕೊಂಡು, ರಾಜ್ಯವನ್ನೇ ತೊರೆದು ಹೊರ ರಾಜ್ಯಗಳಲ್ಲಿ ಓಡಾಡುತ್ತಿದ್ದ ಸ್ವಾಮೀಜಿಯನ್ನು ಬೆಂಗಳೂರು ಪೊಲೀಸ್ ವಿಭಾಗದ ಅಪರಾಧ ನಿಗ್ರಹ ದಳ (ಸಿಸಿಬಿ) ಪೊಲೀಸರು, ಸೆ. 19ರ ರಾತ್ರಿ ಒಡಿಶಾದ ಕಟಕ್ ನಲ್ಲಿ ಸೆರೆ ಹಿಡಿಯುವಲ್ಲಿ ಸಫಲರಾಗಿದ್ದರು.