ಬೆಂಗಳೂರು, ಸೆ, 19 (DaijiworldNews/AK): ತಂಬಾಕು ನಿಯಂತ್ರಣ ಕಾಯ್ದೆಯಲ್ಲಿ ರಾಜ್ಯ ಸರ್ಕಾರ ಕೆಲ ತಿದ್ದುಪಡಿಗಳನ್ನು ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರಿಕಾ ಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡ ಅವರು, ತಂಬಾಕು ಉತ್ಪನ್ನಗಳನ್ನು 18 ಕ್ಕಿಂತ ಕಡಿಮೆ ವಯಸ್ಸಿನವರು ಮಾರಾಟ ಮಾಡಬಾರದು, ಖರೀದಿಸಬಾರದು ಅಂತ ಇರುವ ಕಾಯ್ದೆಯಲ್ಲಿ ತಿದ್ದುಪಡಿ ತಂದು 21 ವರ್ಷ ವಯಸ್ಸಿನವರೆಗೆ ಅದನ್ನು ವಿಸ್ತರಿಸಲಾಗುವವುದು ಎಂದು ಹೇಳಿದರು.
ಅಂದರೆ ಕಾಯ್ದೆ ತಿದ್ದಿಪಡಿಯಾದರೆ 21 ವರ್ಷದೊಳಗಿನವರು ತಂಬಾಕು ಉತ್ಪನ್ನಗಳನ್ನು ಖರೀದಿಸುವಂತಿಲ್ಲ ಮತ್ತು ಮಾರಾಟ ಮಾಡುವಂತೆಯೂ ಇಲ್ಲ. ಹಾಗೆಯೇ, ರಾಜ್ಯದಲ್ಲಿ ಹುಕ್ಕಾ ಬಾರ್ ಗಳನ್ನು ನಿಷೇಧಿಸುವ ಬಗ್ಗೆಯೂ ಸರ್ಕಾರ ಯೋಚಿಸುತ್ತಿದೆ ಎಂದು ಹೇಳಿದರು.
12 ರಿಂದ 25 ವಯೋಮಿತಿಯವರ ಮೇಲೆ ತಂಬಾಕು ಉತ್ಪನ್ನಗಳು ಹಾಗೂ ಹುಕ್ಕಾ ಬಾರ್ ಗಳು ದುಷ್ಪರಿಣಾಮ ಬೀರುತ್ತಿರುವುದರಿಂದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗಿದೆ ಎಂದು ಹೇಳಿದರು.
ಬಿಬಿಎಂಪಿಯಂಥ ಲೈಸೆನ್ಸಿಂಗ್ ಪ್ರಾಧಿಕಾರ ಹಾಗೂ ಪೊಲೀಸರು ಸರ್ಕಾರದ ನಿರ್ಧಾರಗಳನ್ನು ಜಾರಿಗೆ ತರಲು ನೆರವಾಗುತ್ತಾರೆ ಎಂದು ಅವರು ಹೇಳಿದರು.