ಚಿಕ್ಕಮಗಳೂರು, ಎ11(SS): ಜಿಲ್ಲೆಯ ಜನರ ಸಮಸ್ಯೆಗಳನ್ನು ಮೋದಿ ಬಂದು ಪರಿಹರಿಸುತ್ತಾರ…? ಅವರನ್ನು ಟಿವಿಯಲ್ಲಷ್ಟೆ ನೋಡಬೇಕು ಎಂದು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಪ್ರಧಾನಿ ನರೇಂದ್ರ ಮೋದಿ ಪರವಾಗಿ ಮತಯಾಚಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ ಜನರ ಫೋನ್ ಕರೆಯನ್ನು ಸ್ವೀಕರಿಸುತ್ತಾರ..? ಸಾಮಾನ್ಯ ಜನರು ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆಯೇ…? ಎಂದು ಪ್ರಶ್ನಿಸಿದರು.
ಶೋಭಾ ಕರಂದ್ಲಾಜೆ ಅವರು ಐದು ವರ್ಷದ ಅವಧಿಯಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಕ್ಷೇತ್ರದ ಹಳ್ಳಿಗಳಿಗೆ ಬೇಟಿ ನೀಡಿಲ್ಲ, ಸಮಸ್ಯೆ ಆಲಿಸಿಲ್ಲ. ಕುಡಿಯುವ ನೀರಿನ ಬವಣೆ ನಿವಾರಣೆಗೆ ಕ್ರಮವಹಿಸಿಲ್ಲ ಎಂದು ಹೇಳಿದರು.
ಒಂದು ವೇಳೆ ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ಜಿಲ್ಲೆಯ ಅರ್ಧ ಭಾಗ ಅಭಿವೃದ್ಧಿಯಿಂದ ವಂಚಿತವಾಗಲಿದೆ. ಕೊಳವೆಬಾವಿ ಕೊರೆಯುವಂತಿಲ್ಲ, ವಸತಿ, ರಸ್ತೆ, ಚರಂಡಿ ನಿರ್ಮಿಸುವಂತಿಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಶೋಭಾ ಕರಂದ್ಲಾಜೆ ಧ್ವನಿ ಎತ್ತಿಲ್ಲ. ವರದಿ ಜಾರಿ ಬಗ್ಗೆ ಕೇಂದ್ರ ಸರ್ಕಾರ ಏರ್ಪಡಿಸಿದ್ದ ಸಂಸದರ ಸಭೆಗೆ ಅವರು ಗೈರಾಗುವ ಮೂಲಕ ಬೇಜವಾಬ್ದಾರಿತನ ತೋರಿದ್ದಾರೆ ಎಂದು ಟೀಕಿಸಿದರು.