ಬೆಂಗಳೂರು, ಎ11(SS): ಕ್ಷೇತ್ರದಲ್ಲಿ ಗೆದ್ದರೆ ನಾನು ಕೆಲಸ ಮಾಡುತ್ತೇನೆ. ಒಂದು ವೇಳೆ ಸೋತರೆ ಗೆದ್ದವರಿಂದ ಕೆಲಸ ಮಾಡಿಸುತ್ತೇನೆ ಎಂದು ನಟ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಹೇಳಿದ್ದಾರೆ.
ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಮತದಾರರು ಪ್ರಜ್ಞಾಪೂರ್ವಕವಾಗಿ ಮತಚಲಾಯಿಸಬೇಕು. ಕಳೆದ 6 ತಿಂಗಳಿನಿಂದ ಪ್ರಚಾರದಲ್ಲಿ ತೊಡಗಿದ್ದೇನೆ. ಸಮಸ್ಯೆಗಳ ಪರಿಹಾರಕ್ಕೆ ಪರ್ಯಾಯ ರಾಜಕಾರಣದ ಅವಶ್ಯಕತೆಯಿದೆ. ನಾನು ಒಬ್ಬಂಟಿಯಲ್ಲ. ಕ್ಷೇತ್ರದಲ್ಲಿ ತಮಗೆ ರೈತ ಸಂಘಗಳ, ಸಾಹಿತಿ, ಆಶಾ ಕಾರ್ಯಕರ್ತೆಯರ, ಆಟೋ ಚಾಲಕರ ಸಂಘ ಸೇರಿದಂತೆ ಅನೇಕ ಸಂಘಟನೆಗಳು ತಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿ ನಾನು ಗೆದ್ದರೆ ಕೆಲಸ ಮಾಡುತ್ತೇನೆ. ಒಂದು ವೇಳೆ ಸೋತರೆ ಗೆದ್ದವರಿಂದ ಕೆಲಸ ಮಾಡಿಸುತ್ತೇನೆ. ಕೇವಲ 5 ವರ್ಷಕ್ಕಾಗಿ ಮಾತ್ರ ಸ್ಪರ್ಧಿಸದೇ ಮುಂದಿನ ದಿನಗಳ ಬದಲಾವಣೆಗಾಗಿ ಸ್ಪರ್ಧಿಸಿದ್ದೇನೆ. ನನ್ನದು ಭ್ರಮಾರಾಜಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ದೋಸ್ತಿ ಸರ್ಕಾರ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕಿಂತಲೂ ಹೆಚ್ಚಿನದಾಗಿ ತಮ್ಮತಮ್ಮ ಪಕ್ಷದ ಕಾರ್ಯಕರ್ತರನ್ನು ಗೆಲ್ಲುವುದರಲ್ಲಿ ಹೆಣಗಾಡುತ್ತಿವೆ. ರಾಜಕೀಯ ಪ್ರಜ್ಞೆ ಇರುವ ವ್ಯಕ್ತಿಗೆ ಆಳುವ ಪಕ್ಷವನ್ನು ಪ್ರಶ್ನೆ ಮಾಡುವ ಶಕ್ತಿ ಇರಬೇಕು. ಸಮಾಜದಲ್ಲಿ ಹೊಸ ಬದಲಾವಣೆ, ಕ್ರಿಯಾಶೀಲ ಸಮಾಜ ನಿರ್ಮಾಣಕ್ಕೆ ಪರ್ಯಾಯ ರಾಜಕಾರಣ ಬೇಕು ಎಂದು ಹೇಳಿದರು.
ಚುನಾವಣೆ ಎನ್ನುವುದು ಒಂದು ಹಬ್ಬ. ರಾಜಕೀಯದಲ್ಲಿ ಒಂದು ಪಕ್ಷ ಮತ್ತೊಂದು ಪಕ್ಷಕ್ಕೆ ಪರ್ಯಾಯವಲ್ಲ. ತಮ್ಮದು ಜನಪರ ಹೋರಾಟವೇ ಹೊರತು ಯಾವುದೋ ಪಕ್ಷದ ವಿರುದ್ದದ ಹೋರಾಟವಲ್ಲ. ಜನರಿಂದ ಆರಿಸಿಹೋದ ರಾಜಕಾರಣಿಗಳು ಕ್ಷೇತ್ರದಲ್ಲಿ ತಾವು ಮಾಡಿದ ಅಭಿವೃದ್ಧಿ ಕೆಲಸದ ಬಗ್ಗೆ ಜನರ ಮುಂದೆ ಪ್ರಗತಿಪತ್ರ ಪ್ರದರ್ಶಿಸಬೇಕು. ಆದರೆ ಯಾರೂ ಸಹ ಈ ಕೆಲಸವನ್ನು ಮಾಡುತ್ತಿಲ್ಲ. ಹೀಗಾಗಿ ಪರ್ಯಾಯ ರಾಜಕಾರಣ ಬೇಕು ಎಂಬುವುದನ್ನು ಮನಗಂಡ ಬಳಿಕವೇ ಚುನಾವಣೆಗೆ ಸ್ಪರ್ಧಿಸಿರುವುದಾಗಿ ತಿಳಿಸಿದರು.