ಬೆಂಗಳೂರು, ಎ11(SS): ಮೋದಿ ಪುನಃ ಪ್ರಧಾನಿಯಾದರೆ ವಿಶ್ವದಲ್ಲಿ ಭಾರತ ಮುಂಚೂಣಿಗೆ ಬರಲಿದೆ ಎಂದು ಬೆಂಗಳೂರು ಉತ್ತರ ಲೋಕಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಸರ್ಕಾರವು ದೇಶದ ರಕ್ಷಣೆಗೆ ಬದ್ದವಾಗಿದೆ. ಸಮರ್ಥ ನಾಯಕತ್ವ ಮತ್ತು ಸ್ಥಿರ ಸರ್ಕಾರದಿಂದಾಗಿ ಭಾರತ ವಿಶ್ವದ ಪ್ರಮುಖ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮೋದಿ ಅವರು ಪುನಃ ಪ್ರಧಾನಿಯಾದರೆ ವಿಶ್ವದಲ್ಲಿ ಭಾರತ ಮುಂಚೂಣಿಗೆ ಬರಲಿದೆ ಎಂದು ಹೇಳಿದರು.
ಕಾಂಗ್ರೆಸ್ನವರಿಗೆ ಸ್ವಂತ ವಿಚಾರಗಳಿಲ್ಲ. ಆದ್ದರಿಂದಲೇ ಟೀಕೆಯನ್ನೇ ಪ್ರಮುಖವಾಗಿ ಮಾಡುತ್ತಿದ್ದಾರೆ. ದೇಶ ಅಭಿವೃದ್ಧಿ ಹೊಂದುವುದು ಅವರಿಗೆ ಬೇಕಾಗಿಲ್ಲ. ದೇಶದ ರಕ್ಷಣೆ ವಿಚಾರದಲ್ಲಿ ನರೇಂದ್ರ ಮೋದಿ ಅವರು ರಾಜಿಯಾಗುವುದಿಲ್ಲ. ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಪುಲ್ವಾಮಾ ದಾಳಿಯಾದ ನಂತರ ಪಾಕಿಸ್ತಾನದ ನೆಲೆಗೆ ನುಗ್ಗಿ ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸ ಮಾಡಲಾಗಿದೆ. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರ ಭಯೋತ್ಫಾದನೆ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.
ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಕಳೆದ ಬಾರಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಕೊಟ್ಟಿದ್ದೀರಿ. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದರು.