ಬೆಂಗಳೂರು,ಸೆ 16 (DaijiworldNews/AK): ಡಿಸೆಂಬರ್ ಬಳಿಕ ಯಾವುದೇ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದ್ದಾರೆ.
ಜಯನಗರದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನವೀಕರಿಸಿದ ತುರ್ತು ನಿಗಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಡಿಸೆಂಬರ್ ಬಳಿಕ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತಿಲ್ಲ ಎಂದು ಯಾರು ಹೇಳಬಾರದು. ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಔಷಧಿಗಳನ್ನ ಆಸ್ಪತ್ರೆಗಳಿಗೆ ಪೂರೈಸುವಂತೆ ರಾಜ್ಯ ಔಷಧಿ ಸರಬರಾಜು ಕಾರ್ಪೊರೇಷನ್ ತಾಕೀತು ಮಾಡಿದ್ದೇನೆ ಎಂದು ತಿಳಿಸಿದರು.
ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಜೊತೆಗೆ ಉಚಿತ ಔಷಧಿಗಳು ಸಿಗುವಂತಾಗಬೇಕು. ಸರಿಯಾಗಿ ಔಷಧಿಗಳು ಸಿಕ್ಕಾಗ ಮಾತ್ರ ಸರಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸಲು ಸಾಧ್ಯ.
ಆಸ್ಪತ್ರೆಯ ಹೊರಗಡೆ ಜನ ಔಷಧಿ ಕೇಂದ್ರಗಳ ಅವಶ್ಯಕತೆಯೇ ಇಲ್ಲ. ಆಸ್ಪತ್ರೆಗಳಲ್ಲೇ ಔಷಧಿಗಳು ಸರಿಯಾಗಿ ದೊರೆತರೆ ಜನರು ಔಷಧಿ ಪಡೆಯಲು ತಿರುಗಾಡುವ ಅಗತ್ಯತೆಯೇ ಬರುವುದಿಲ್ಲ. ಸದ್ಯ ವೈದ್ಯರು ರೋಗಿಗಳಿಗೆ ಚೀಟಿ ಬರೆದುಕೊಡುವ ಪದ್ದತಿಯನ್ನ ಬದಲಿಸಬೇಕು ಎಂದು ಹೇಳಿದರು.